ರಸ್ತೆಗೆ ಹರಿದ 14 ಸಾವಿರ ಲೀಟರ್ ಡೀಸೆಲ್; ಬಕೆಟ್ ಹಿಡಿದು ಮುಗಿಬಿದ್ದ ಜನ 
ನ್ಯೂಸ್

ಡೀಸೆಲ್ ಟ್ಯಾಂಕರ್ ಪಲ್ಟಿಯಾಗ್ತಿದ್ದಂತೆ ಬಕೆಟ್ ಹಿಡಿದು ಓಡಿಬಂದ ಜನ; ಪೊಲೀಸರನ್ನು ಕಂಡು ಎಸ್ಕೇಪ್! | Uttar Pradesh diesel tanker

ಉತ್ತರ ಪ್ರದೇಶದ ಸೋನಭದ್ರದಲ್ಲಿ 14 ಸಾವಿರ ಲೀಟರ್ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ರಸ್ತೆಗೆ ಹರಿದ ಡೀಸೆಲ್ ಸಂಗ್ರಹಿಸಲು ಬಕೆಟ್, ಕ್ಯಾನ್ ಹಿಡಿದು ಜನರು ಮುಗಿಬಿದ್ದಿದ್ದಾರೆ.

Uttar Pradesh diesel depot: ರಸ್ತೆಯ ಮೇಲೆ ಡೀಸೆಲ್ ಚೆಲ್ಲುತ್ತಿದ್ದಂತೆ ಬಕೆಟ್‌, ಕ್ಯಾನ್‌ ಹಿಡಿದುಕೊಂಡು ಜನರು ಅದನ್ನು ಸಂಗ್ರಹಿಸಲು ಮುಗಿಬಿದ್ದಿದ್ದಾರೆ. ಸುಮಾರು 14 ಸಾವಿರ ಲೀಟರ್ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾದ ಬಳಿಕ ಈ ಘಟನೆ ನಡೆದಿದೆ.

ಸೋನಭದ್ರ ಜಿಲ್ಲೆಯ ಮಾರ್ಕುಂಡಿ ಕಣಿವೆಯಲ್ಲಿ ಈ ಅಪಘಾತ ಸಂಭವಿಸಿದೆ. ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಅದರಲ್ಲಿದ್ದ ಭಾರೀ ಪ್ರಮಾಣದ ಡೀಸೆಲ್ ರಸ್ತೆಯ ಮೇಲೆ ಹರಿದುಬಂದಿದೆ. ಇದನ್ನು ನೋಡಿದ ಸ್ಥಳೀಯರು ಹಾಗೂ ವಾಹನ ಸವಾರರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಕೆಲವರು ಅಪಾಯದ ಅರಿವಿದ್ದರೂ ಬಕೆಟ್‌, ಕ್ಯಾನ್‌ ಸೇರಿದಂತೆ ಸಿಕ್ಕಸಿಕ್ಕ ಪಾತ್ರೆಗಳನ್ನು ಹಿಡಿದು ಡೀಸೆಲ್ ಸಂಗ್ರಹಿಸಲು ಮುಂದಾಗಿದ್ದಾರೆ.

ಬಕೆಟ್‌, ಕ್ಯಾನ್‌ ಹಿಡಿದು ಬಂದ ಜನ

ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಮಹಿಳೆಯರು ಸೇರಿದಂತೆ ಹಲವರು ರಸ್ತೆಯಲ್ಲಿ ಹರಿದ ಡೀಸೆಲ್ ಅನ್ನು ಬಕೆಟ್‌ ಮತ್ತು ಕ್ಯಾನ್‌ಗಳಲ್ಲಿ ತುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಗುರ್ಮಾ ಪೊಲೀಸ್ ಹೊರಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಡೀಸೆಲ್ ಸಂಗ್ರಹಿಸುತ್ತಿದ್ದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಬೆಂಕಿ ಹೊತ್ತಿಕೊಳ್ಳುವ ಆತಂಕ

ರಸ್ತೆಗೆ ಭಾರೀ ಪ್ರಮಾಣದಲ್ಲಿ ಡೀಸೆಲ್ ಹರಿದಿದ್ದರಿಂದ ಬೆಂಕಿ ಹೊತ್ತಿಕೊಳ್ಳುವ ಆತಂಕ ಎದುರಾಗಿತ್ತು. ಕೂಡಲೇ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬಳಿಕ ಸಂಚಾರವನ್ನೂ ಸಹಜ ಸ್ಥಿತಿಗೆ ತರಲಾಯಿತು.

ಇದನ್ನೂ ಓದಿ: ಶಾಲೆಯಲ್ಲಿ ಮಕ್ಕಳನ್ನು ‘ದಡ್ಡ’, ‘ಸೋಮಾರಿ’ ಎಂದರೆ ಶಿಕ್ಷಕರಿಗೆ ಪನಿಶ್‌ಮೆಂಟ್; ಏನಿದು ಹೊಸ ನಿಯಮ? | Teachers new rule

ಬ್ರೇಕ್‌ ಫೇಲ್‌ ಆಗಿ ಪಲ್ಟಿಯಾದ ಟ್ಯಾಂಕರ್

ಈ ಟ್ಯಾಂಕರ್‌ ಮುಘಲ್‌ಸರಾಯಿಯಿಂದ ಒಡಿಶಾಕ್ಕೆ ಡೀಸೆಲ್ ಸಾಗಿಸುತ್ತಿತ್ತು. ಚಾಲಕ ಪವನ್ ಕುಮಾರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಏಕಾಏಕಿ ಬ್ರೇಕ್‌ ಫೇಲ್‌ ಆದ ಕಾರಣ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಎಂದು ಚಾಲಕ ತಿಳಿಸಿದ್ದಾರೆ. ಅಪಘಾತದ ಬಳಿಕ ಮಾರ್ಕುಂಡಿ ಕಣಿವೆಯಲ್ಲಿ ಸುಮಾರು ಅರ್ಧ ಗಂಟೆ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬಳಿಕ ಸಂಚಾರ ಸಹಜ ಸ್ಥಿತಿಗೆ ಮರಳಿದೆ.