ಚಂಡೀಗಢ: ಸಹೋದರನಿಗೆ ಕಷ್ಟ ಕಾಲದಲ್ಲಿ ಹಣ ನೀಡಿ ಸಹಾಯ ಮಾಡಿದ ಮಹಿಳೆಯೊಬ್ಬಳು, ಆ ಹಣವನ್ನು ಆತನಿಂದ ವಾಪಾಸು ಕೇಳಿದ್ದಕ್ಕೆ ಆತ ವಿಷವನ್ನೇ ಕೊಟ್ಟು ಕಳುಹಿಸಿರುವ ಘಟನೆ ಪಂಜಾಬ್ನ ಗುರುದಾಸ್ಪುರದಲ್ಲಿ ನಡೆದಿದೆ.
ಭಾರತಿ ಶರ್ಮಾ ಹೆಸರಿನ ಮಹಿಳೆ ಸಹೋದರ ಪ್ರದೀಪ್ ಶರ್ಮಾನಿಗೆ ಹಣ ನೀಡಿದ್ದಳು. ಇತ್ತೀಚೆಗೆ ಆ ಹಣವನ್ನು ವಾಪಾಸು ಕೊಡುವಂತೆ ಆಕೆ ಕೇಳಿದ್ದಾಳೆ. ಆದರೆ ಅದಕ್ಕೆ ಒಪ್ಪದ ಪ್ರದೀಪ್, ಹಣದ ಬದಲಾಗಿ ವಿಷವನ್ನು ಭಾರತಿಯ ಮನೆಗೆ ಕಳುಹಿಸಿಕೊಟ್ಟಿದ್ದಾನೆ. ಒಂದು ವೇಳೆ ನೀನು ವಿಷ ಕುಡಿದು ಸಾಯದಿದ್ದರೆ ನಾನೇ ಬಂದು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸಹೋದರನಿಂದಾಗಿ ಮೋಸ ಹೋದ ಭಾರತಿ ಸಾಮಾಜಿಕ ಜಾಲತಾಣಗಳಲ್ಲಿ ನನಗೆ ನ್ಯಾಯ ಕೊಡಿಸಿ ಎಂದು ವಿಡಿಯೋ ಹರಿಬಿಟ್ಟಿದ್ದಾಳೆ. ನಂತರ ಸಹೋದರ ಕಳುಹಿಸಿಕೊಟ್ಟಿದ್ದ ವಿಷವನ್ನು ಗಂಡನಿಗೆ ಮತ್ತು 16 ವರ್ಷದ ಮಗಳಿಗೆ ಕುಡಿಸಿ, ತಾನೂ ಕುಡಿದು ಉಸಿರು ಬಿಟ್ಟಿದ್ದಾಳೆ.
ನಗರದಲ್ಲಿ ಆದ ಪ್ರಕರಣದ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ. ಆಗ ನಡೆದ ಘಟನೆಯನ್ನು ಭಾರತಿಯ ಮಗ ಕುನಾಲ್ ಶರ್ಮಾ ಪೊಲೀಸರಿಗೆ ವಿವರಿಸಿದ್ದಾನೆ. ಇದೀಗ ಪ್ರದೀಪ್ ಸೇರಿ 10 ಜನರು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕುನಾಲ್ ಹೇಳಿರುವ ಕಥೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. (ಏಜೆನ್ಸೀಸ್)