ಸಾಂದರ್ಭಿಕ ಚಿತ್ರ 
ನ್ಯೂಸ್

ಹಬ್ಬಕ್ಕಾಗಿ ಊರಿನತ್ತ ಹೊರಟ ಜನರ ದಂಡು; ಉದ್ದಕ್ಕೂ ಟ್ರಾಫಿಕ್​ ಜಾಮ್, ಸಾರ್ವಜನಿಕರ ಪರದಾಟ..

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಲುವಾಗಿ ಊರಿಗೆ ಹೋಗಲಿರುವ ಹಲವಾರು ಮಂದಿ ಇಂದೇ ಹೊರಟಿರುವುದರಿಂದ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಗಿಜಿಗುಡುವ ಜನಜಂಗುಳಿ ಸೃಷ್ಟಿಯಾಗಿದೆ. ಮಾತ್ರವಲ್ಲ, ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರೂ ಪರದಾಡುವಂತಾಗಿದೆ.

ಕೆಲವೆಡೆ ಸೆ. 18ರಂದು ಹಾಗೂ ಇನ್ನು ಕೆಲವು ಕಡೆ ಸೆ. 19ರಂದು ಈ ಸಲ ಚೌತಿ ಆಚರಣೆ ಮಾಡಲಾಗುತ್ತಿದೆ. ವಾರಾಂತ್ಯದ ರಜೆ ಜತೆಗೆ ಹಬ್ಬದ ರಜೆಯೂ ಸೇರಿ ಮೂರ್ನಾಲ್ಕು ದಿನಗಳ ಸರಣಿ ರಜೆ ಸಿಗುವುದರಿಂದ ಹಲವರು ಹಬ್ಬಕ್ಕಾಗಿ ಇಂದೇ ಊರಿಗೆ ಹೊರಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಜನಜಂಗುಳಿ ಉಂಟಾಗಿದೆ.

ಜನಸಂಚಾರ ಜಾಸ್ತಿ ಇರುವುದರಿಂದ ಊರಿಗೆ ಹೊರಟ ಬಸ್ ಹಾಗೂ ಇತರ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಟೌನ್​ಹಾಲ್​ನಿಂದ ಮೆಜೆಸ್ಟಿಕ್​ವರೆಗೂ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿವೆ. ಟ್ರಾಫಿಕ್ ಜಾಮ್​ ಕೂಡ ಜಾಸ್ತಿ ಇದ್ದಿದ್ದರಿಂದ 2-3 ಕಿ.ಮೀ. ದೂರ ವಾಹನದಟ್ಟಣೆ ಉಂಟಾಗಿ, ನಿಧಾನಗತಿಯ ಚಲನೆ ಕಂಡುಬಂದಿದೆ. ಪರಿಣಾಮವಾಗಿ ಕೆಲವರು ನಡೆದೇ ಬಸ್​ ನಿಲ್ದಾಣ ತಲುಪುವಂತಾಗಿದೆ.

ಆಟೋ-ಕ್ಯಾಬ್​ಗಳಿಗೆ ಬೇಡಿಕೆ ಉಂಟಾಗಿದ್ದಲ್ಲದೆ, ಮೆಟ್ರೋ ಕೂಡ ತುಂಬಿ ತುಳುಕಿದೆ. ಸೋಮವಾರ- ಮಂಗಳವಾರ ಗೌರಿ-ಗಣೇಶ ಹಬ್ಬದ ಪ್ರಯುಕ್ತ ರಜೆ ಇರುವುದರಿಂದ ಪರ ಊರಿನವರು ಇಂದೇ ಊರಿಗೆ ಹೊರಟಿದ್ದರಿಂದ ಇಂಥ ಸನ್ನಿವೇಶ ಸೃಷ್ಟಿಯಾಗಿದೆ.