ದಸರಾ ಪ್ರಯಾಣದಿಂದ ಬೆಂಗಳೂರಿನಲ್ಲಿ ಭಾರಿ ಟ್ರಾಫಿಕ್ ಜಾಮ್ 
ನ್ಯೂಸ್

ದಸರಾ ಹಬ್ಬಕ್ಕೆ ಊರಿಗೆ ಹೊರಟ ಜನ: ಬೆಂಗಳೂರಲ್ಲಿ ಟ್ರಾಫಿಕ್ ಜಾಮ್, ಮಳೆಯಿಂದ ಪರದಾಟ! | Bengaluru Traffic Jam

ದಸರಾ ಹಬ್ಬಕ್ಕೆ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಬೆಂಗಳೂರಿನ ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಇದರ ಜತೆಗೆ ಸಂಜೆ ಸುರಿದ ಮಳೆಯಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವಂತಾಯಿತು.

• ದಸರಾ ಹಬ್ಬಕ್ಕೆ ಊರಿನತ್ತ ಹೊರಟ ಬೆಂಗಳೂರಿನ ಜನ

• ಮೈಸೂರು ರಸ್ತೆ, ಪೀಣ್ಯ ಮೇಲ್ಸೇತುವೆಯಲ್ಲೂ ಭಾರಿ ಸಂಚಾರ ದಟ್ಟಣೆ

• ಗೊರಗುಂಟೆಪಾಳ್ಯದಿಂದ ನಾಗಸಂದ್ರದವರೆಗೆ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್

Bengaluru traffic: ದಸರಾ ಹಬ್ಬಕ್ಕೆ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಶುಕ್ರವಾರ ಸಂಜೆ ಶುರುವಾದ ಟ್ರಾಫಿಕ್ ಕಿರಿಕಿರಿ ತಡರಾತ್ರಿವರೆಗೂ ಮುಂದುವರಿದಿತ್ತು. ಶನಿವಾರವೂ ಇದೇ ಪರಿಸ್ಥಿತಿ ಕಂಡುಬಂದಿದ್ದು, ಸಂಜೆ ಸುರಿದ ಮಳೆಯಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ಮತ್ತಷ್ಟು ಪರದಾಡುವಂತಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಸಾಗುತ್ತಿದ್ದವು. ಕೆಲವೆಡೆ ವಾಹನಗಳನ್ನು ಮುಂದಕ್ಕೆ ಚಲಿಸುವುದಕ್ಕೂ ಸವಾರರು ಕಷ್ಟಪಡಬೇಕಾಯಿತು. ದಸರಾ ಹಬ್ಬಕ್ಕೆ ತಮ್ಮ ಊರುಗಳತ್ತ ಹೊರಟಿದ್ದ ಜನರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ತೊಂದರೆ ಅನುಭವಿಸಿದರು.

ತುಮಕೂರು, ಮೈಸೂರು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್

ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನೆಲಮಂಗಲದವರೆಗೂ ವಾಹನ ದಟ್ಟಣೆ ಕಂಡುಬಂದಿತು. ಮೈಸೂರು ರಸ್ತೆಯಲ್ಲೂ ಇದೇ ಪರಿಸ್ಥಿತಿ ಇತ್ತು. ಮೈಸೂರು ಕಡೆಗೆ ತೆರಳುವ ವಾಹನಗಳು ಎಕ್ಸ್‌ಪ್ರೆಸ್‌ವೇ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದವು.

ಪೀಣ್ಯ ಮೇಲ್ಸೇತುವೆಯಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸವಾರರು ಟ್ರಾಫಿಕ್ ಕಿರಿಕಿರಿ ಎದುರಿಸಿದರು.

ಮೆಜೆಸ್ಟಿಕ್, ರೈಲು ನಿಲ್ದಾಣಗಳಲ್ಲಿ ಜನಜಂಗುಳಿ

ಶನಿವಾರ ರಾತ್ರಿ ಮೆಜೆಸ್ಟಿಕ್ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರೈಲು ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣ ಸೇರಿದಂತೆ ನಗರದ ವಿವಿಧ ಸಾರಿಗೆ ಕೇಂದ್ರಗಳಲ್ಲಿ ಜನಜಂಗುಳಿ ಕಂಡುಬಂದಿತು.

ಇದನ್ನೂ ಓದಿ: ಅಮ್ಮನ ಪ್ರಾಣ ಕಣ್ಣೆದುರಲ್ಲೇ ಹೋಯ್ತು, ನಾನು ಬದುಕಿದ್ದೇ ಪವಾಡ!...ಕಟುಕರನ್ನೂ ಕರಗಿಸುವಂತಿದೆ ಕೋಲ್ಕತ್ತಾ ದುರಂತದ ಕಥೆ! | Kolkata stampede

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ದಸರಾ ಹಬ್ಬಕ್ಕೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ, ಪ್ರಯಾಣಿಕರು ಪರದಾಡುವಂತಾಯಿತು.