ಅಮ್ಮನ ಪ್ರಾಣ ಕಣ್ಣೆದುರಲ್ಲೇ ಹೋಯ್ತು, ನಾನು ಬದುಕಿದ್ದೇ ಪವಾಡ!...ಕಟುಕರನ್ನೂ ಕರಗಿಸುವಂತಿದೆ ಕೋಲ್ಕತ್ತಾ ದುರಂತದ ಕಥೆ! | Kolkata stampede

Kolkata stampede: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯ ಸಂಭ್ರಮವು ಕ್ಷಣಾರ್ಧದಲ್ಲಿ ಭೀಕರ ದುರಂತವಾಗಿ ಬದಲಾಗಿದೆ. ಇಲ್ಲಿನ ಪ್ರಸಿದ್ಧ ಚೋರ್‌ಬಗಾನ್ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 19 ಜನ ದುರ್ಮರಣಕ್ಕೀಡಾಗಿದ್ದು, ಸುಮಾರು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಳೆಯಿಂದ ತಪ್ಪಿಸಿಕೊಳ್ಳಲು ಮುಗಿಬಿದ್ದ ಜನಸಂದಣಿಯಿಂದಾಗಿ ಈ ದುರ್ಘಟನೆ ಸಂಭವಿಸಿದ್ದು, ಕಣ್ಣೆದುರಲ್ಲೇ ತಾಯಿಯನ್ನು ಕಳೆದುಕೊಂಡ 25 ವರ್ಷದ ಯುವಕ ಸೋನು ಪಾಲ್ ಮಾತುಗಳು ಎಂತಹ ಕಟುಕರನ್ನು ಕರಗಿಸುವಂತಿದೆ.
ಕಟುಕರನ್ನೂ ಕರಗಿಸುವಂತಿದೆ ಕೋಲ್ಕತ್ತಾ ದುರಂತದ ಕಥೆ!
ಕಟುಕರನ್ನೂ ಕರಗಿಸುವಂತಿದೆ ಕೋಲ್ಕತ್ತಾ ದುರಂತದ ಕಥೆ!
Published on: 

Kolkata stampede: ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯ ಸಂಭ್ರಮವು ಕ್ಷಣಾರ್ಧದಲ್ಲಿ ಭೀಕರ ದುರಂತವಾಗಿ ಬದಲಾಗಿದೆ. ಇಲ್ಲಿನ ಪ್ರಸಿದ್ಧ ಚೋರ್‌ಬಗಾನ್ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 19 ಜನ ದುರ್ಮರಣಕ್ಕೀಡಾಗಿದ್ದು, ಸುಮಾರು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಳೆಯಿಂದ ತಪ್ಪಿಸಿಕೊಳ್ಳಲು ಮುಗಿಬಿದ್ದ ಜನಸಂದಣಿಯಿಂದಾಗಿ ಈ ದುರ್ಘಟನೆ ಸಂಭವಿಸಿದ್ದು, ಕಣ್ಣೆದುರಲ್ಲೇ ತಾಯಿಯನ್ನು ಕಳೆದುಕೊಂಡ 25 ವರ್ಷದ ಯುವಕ ಸೋನು ಪಾಲ್ ಮಾತುಗಳು ಎಂತಹ ಕಟುಕರನ್ನು ಕರಗಿಸುವಂತಿದೆ.

ಘಟನೆಯ ಕುರಿತು ಮಾತನಾಡಿರುವ ಸೋನು ಪಾಲ್, ಅಂದು ಸಂಜೆ ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಯಿಂದ ರಕ್ಷಣೆ ಪಡೆಯಲು ಪೆಂಡಾಲ್‌ನ ಪ್ರವೇಶದ್ವಾರದಲ್ಲಿ ನೂರಾರು ಜನರು ಜಮಾಯಿಸಿದ್ದರು. ಮಳೆಯ ಆರ್ಭಟಕ್ಕೆ ಹೊರಹೋಗಲು ಯಾರೂ ಬಯಸಲಿಲ್ಲ. ಬದಲಿಗೆ, ಪೆಂಡಾಲ್ ಒಳಗೆ ನುಗ್ಗಲು ಮುಗಿಬಿದ್ದ ಜನರಿಂದಾಗಿ ಒಳಗೆ ತೀವ್ರ ನೂಕುನುಗ್ಗಲು ಉಂಟಾಯಿತು ಎಂದು ವಿವರಿಸಿದ್ದಾರೆ. ಹೊರಗೆ ಮಳೆಯಾಗುತ್ತಿತ್ತು, ಯಾರೂ ಹೊರಗೆ ಹೋಗಲು ಬಯಸಲಿಲ್ಲ. ಪ್ರವೇಶದ್ವಾರದಲ್ಲಿ ನಿಂತಿದ್ದ ಜನರು ಒಳಗೆ ನುಗ್ಗಲು ನಿರಂತರವಾಗಿ ತಳ್ಳಾಡುತ್ತಿದ್ದರು ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕಣ್ಣೆದುರಲ್ಲೇ ಪ್ರಾಣಬಿಟ್ಟ ತಾಯಿ!

ಜನಸಂದಣಿಯ ಒತ್ತಡವು ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಮೀರಿತು. ಒತ್ತಡವನ್ನು ತಡೆಯಲಾರದೆ ಒಳಗೆ ಇದ್ದವರೆಲ್ಲರೂ ಒಬ್ಬರ ಮೇಲೊಬ್ಬರು ಬಿದ್ದರು ಎಂದು ಸೋನು ಪಾಲ್ ಕಣ್ಣೀರು ಹಾಕಿದ್ದಾರೆ. ಈ ನೂಕುನುಗ್ಗಲಿನಲ್ಲಿ ತಾವೂ ಕೂಡ ಜನರ ಗುಂಪಿನ ಅಡಿಯಲ್ಲಿ ಸಿಲುಕಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ನಾನು ಕೂಡ ಜನರ ಗುಂಪಿನಡಿಯಲ್ಲಿ ಸಿಲುಕಿಕೊಂಡಿದ್ದೆ. ಹೇಗೋ ಕಷ್ಟಪಟ್ಟು ಎದ್ದು ನನ್ನ ತಾಯಿಯ ಬಳಿ ಹೋದೆ, ಆದರೆ ಅಷ್ಟೊತ್ತಿಗಾಗಲೇ ಅವರು ಸಾವನ್ನಪ್ಪಿದ್ದರು. ನನ್ನ ತಾಯಿ ನನ್ನ ಕಣ್ಣೆದುರಲ್ಲೇ ಪ್ರಾಣ ಬಿಟ್ಟರು, ಇನ್ನು ಸ್ವಲ್ಪದರಲ್ಲೇ ನಾನು ಕೂಡ ಬದುಕುಳಿಯುತ್ತಿರಲಿಲ್ಲ ಎಂದು ಆಘಾತಕಾರಿ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಈ ದುರ್ಘಟನೆಯು ಶನಿವಾರ ರಾತ್ರಿ 7.40ರ ಸುಮಾರಿಗೆ ಗಿರೀಶ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಲ್ತುಳಿತದಲ್ಲಿ ಗಾಯಗೊಂಡ ಎಲ್ಲರನ್ನೂ ತಕ್ಷಣವೇ ಕೊಲ್ಕತ್ತಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಯೋಜಕರ ವಿರುದ್ಧ ಆಕ್ರೋಶ!

ಈ ದುರಂತದ ಬೆನ್ನಲ್ಲೇ ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಆಡಳಿತ ಹಾಗೂ ಪೂಜಾ ಸಮಿತಿ ಆಯೋಜಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಭದ್ರತಾ ವೈಫಲ್ಯ ಮತ್ತು ಕಳಪೆ ಜನಸಂದಣಿ ನಿರ್ವಹಣೆಯೇ ಈ ದುರಂತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಂದು ತಮ್ಮವರ ಮೃತದೇಹಗಳನ್ನು ತೆಗೆದುಕೊಂಡು ಹೋಗುವಂತೆ ಆಸ್ಪತ್ರೆಯಲ್ಲಿ ತಿಳಿಸಲಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ನಾವು ಮೃತದೇಹವನ್ನು ಪಡೆದುಕೊಳ್ಳುತ್ತೇವೆ, ಆದರೆ ಇದಕ್ಕೆ ಹೊಣೆ ಯಾರು? ಪೊಲೀಸರು ಮತ್ತು ಆಡಳಿತ ಎಲ್ಲಿತ್ತು..? ಎಂದು ಮೃತರೊಬ್ಬರ ನೆರೆಹೊರೆಯವರಾದ ಸನ್ನಿ ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ಕಾಲ್ತುಳಿತ ದುರಂತದಲ್ಲಿ ಸುಮಾರು 30 ವರ್ಷ ವಯಸ್ಸಿನ ತನ್ನ ಸಹೋದರಿಯನ್ನು ಕಳೆದುಕೊಂಡ ಶುಭಮ್ ಸೋಂಕರ್ ಎಂಬುವವರು ಭಾವುಕರಾದರು. ತಮ್ಮ ಕುಟುಂಬದೊಂದಿಗೆ ಪೆಂಡಾಲ್ ಹ್ಯಾಪಿಂಗ್‌ಗೆ ತೆರಳಿದ್ದ ಸಹೋದರಿಯ ವಿವಾಹಕ್ಕೆ ಸಿದ್ಧತೆ ನಡೆಸುತ್ತಿದ್ದೆವು ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಕಳಪೆ ನಿರ್ವಹಣೆ ಆರೋಪ!

ಚೋರ್‌ಬಗಾನ್ ಪೆಂಡಾಲ್‌ನಲ್ಲಿ ಕೊಲ್ಕತ್ತಾದ ಇತರ ಪೂಜಾ ಪೆಂಡಾಲ್‌ಗಳಿಗೆ ಹೋಲಿಸಿದರೆ ಜನಸಂದಣಿ ನಿರ್ವಹಣೆ ಅತ್ಯಂತ ಕಳಪೆಯಾಗಿತ್ತು ಎಂದು ಸ್ಥಳೀಯ ನಿವಾಸಿ ಜಾನ್ ರೆಹಮಾನ್ ಆರೋಪಿಸಿದ್ದಾರೆ. ಆಯೋಜಕರು ಅಥವಾ ಆಡಳಿತ ಮಂಡಳಿ, ಈ ದುರಂತದ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ..? ಯಾರಾದರೂ ಇದಕ್ಕೆ ಸ್ಪಷ್ಟ ಉತ್ತರ ನೀಡಲೇಬೇಕು ಎಂದು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದುರ್ಗಾ ಪೂಜೆಯ ಸಂಭ್ರಮದಲ್ಲಿದ್ದ ಮಹಾನಗರದಲ್ಲಿ ಸಂಭವಿಸಿದ ಈ ದುರ್ಘಟನೆ ಇಡೀ ರಾಜ್ಯದಲ್ಲಿ ಆಘಾತ ಹಾಗೂ ಶೋಕಮೂಡಿಸಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net