ನ್ಯೂಸ್

ಜನತೆಯೇ ನನ್ನ ಸುರಕ್ಷಾ ಕವಚ: ಲೋಕಸಭೆ ಚುನಾವಣೆಗೆ ಪ್ರಧಾನಿ ರಣಕಹಳೆ

ಹರ್ಯಾಣ/ಜೈಪುರ: ಅಯೋಧ್ಯೆ ರಾಮಮಂದಿರ ನಿರ್ಮಾಣ ಮತ್ತು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಕುರಿತ ಕಾಂಗ್ರೆಸ್​ನ ನಿಲುವಿನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ತನ್ನೆಲ್ಲ ಮೋರ್ಚಾಗಳನ್ನು ನನ್ನ ವಿರುದ್ಧ ಬಳಸಲಾರಂಭಿಸಿದೆ. ಆದರೆ ದೇಶದ ಜನರೇ ನನಗೆ ಸುರಕ್ಷಾ ಕವಚ ಎಂದು ಹೇಳಿದ್ದಾರೆ.

ಹರ್ಯಾಣದ ರೇವಾರಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಸ್ಥಾಪನೆಗೆ ಅಡಿಪಾಯ ಹಾಕಿ ಮತ್ತು ರೂ. 9,770 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತ ವಿಶ್ವದಲ್ಲಿ ಹೊಸ ಎತ್ತರಕ್ಕೆ ತಲುಪಿದೆ. ಜನರ ಆಶೀರ್ವಾದದಿಂದ ಇದು ಸಾಧ್ಯವಾಗುತ್ತಿದೆ ಎಂದರು. ಯುಎಇ ಮತ್ತು ಕತಾರ್ ಭೇಟಿ ಉಲ್ಲೇಖಿಸಿದ ಅವರು, ವಿಶ್ವದ ಮೂಲೆಮೂಲೆಯಿಂದ ಈಗ ಭಾರತಕ್ಕೆ ಗೌರವ ಪ್ರಾಪ್ತಿಯಾಗುತ್ತಿದೆ. ಇದು ಮೋದಿಗೆ ಮಾತ್ರವಲ್ಲ ಪ್ರತಿ ಭಾರತೀಯನಿಗೂ ಸಲ್ಲುತ್ತದೆ ಎಂದರು.

ರಾಮನನ್ನು ಕಾಲ್ಪನಿಕ ಎಂದು ಕರೆಯುತ್ತಿದ್ದವರು ಮತ್ತು ಮಂದಿರ ನಿರ್ವಣವಾಗಲು ಇಷ್ಟಪಡದಿದ್ದ ಮಂದಿ ಈಗ ಜೈ ಸಿಯಾ ರಾಮ್ ಎಂದು ಜಪಿಸುತ್ತಿದ್ದಾರೆ ಎಂದ ಪ್ರಧಾನಿ, ಕಾಂಗ್ರೆಸ್ ಒಂದು ಕುಟುಂಬದ ಪ್ರೀತಿಯಲ್ಲಿ ಸಿಲುಕಿದೆ. ಹರ್ಯಾಣದಲ್ಲೂ ಅದೇ ಪರಿಸ್ಥಿತಿ ಇದೆ. ಕಾಂಗ್ರೆಸ್ ನಾಯಕನಿಗೆ ಸ್ಟಾರ್ಟಪ್​ವೊಂದನ್ನೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾದರೆ ಆತ ದೇಶವನ್ನು ಹೇಗೆ ಮುನ್ನಡೆಸಬಹುದು ಎಂದು ಪ್ರಶ್ನಿಸಿದರು. ಕಾಂಗ್ರೆಸ್​ಗೆ ಕಾರ್ಯಕರ್ತರೇ ಇಲ್ಲ ಎಂಬಂತಾಗಿದ್ದು, ಅಧಿಕಾರದಲ್ಲಿರುವೆಡೆ ಸರ್ಕಾರ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಸಂಬಳ, ಪಿಂಚಣಿ ನೀಡಲು ಸಮಸ್ಯೆ ಎದುರಿಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರದಲ್ಲಿ ಉಳಿಯುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಕಾಂಗ್ರೆಸ್ ಭಾವಿಸುತ್ತಿದೆ. ಅದಕ್ಕಾಗಿಯೇ ಬಡವನ ಮಗನಾದ ನನ್ನ ಮೇಲೆ ಒಂದರ ಮೇಲೊಂದರಂತೆ ಷಡ್ಯಂತ್ರಗಳನ್ನು ರೂಪಿಸುತ್ತಿದೆ ಎಂದರು.

ಒಂದೇ ಕುಟುಂಬಕ್ಕೆ ಪಕ್ಷದ ಸಮರ್ಪಣೆ: ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಉತ್ತೇಜಿಸುವುದು, ಸೇನೆ ಮತ್ತು ಸೈನಿಕರನ್ನು ದುರ್ಬಲಗೊಳಿಸುವುದು ಕಾಂಗ್ರೆಸ್​ನ ದಾಖಲೆಯಾಗಿದೆ. ಈ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಇಂದಿಗೂ ಕಾಂಗ್ರೆಸ್​ನಲ್ಲಿ ತಂಡ ಒಂದೇ, ನಾಯಕ ಒಂದೇ, ಉದ್ದೇಶ ಕೂಡ ಒಂದೇ. ಎಲ್ಲರ ಸಮರ್ಪಣೆ ಒಂದೇ ಕುಟುಂಬದ ಕಡೆಗೆ ಮಾತ್ರ. ಹಾಗಾಗಿ ಲೂಟಿ, ಭ್ರಷ್ಟಾಚಾರ, ವಿನಾಶ ಇರುವ ನೀತಿಯೂ ಒಂದೇ ಆಗಿರುತ್ತದೆ ಎಂದು ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡರು.

ತೆರಿಗೆ ಇಲಾಖೆಯಿಂದ ಕಾಂಗ್ರೆಸ್ ಖಾತೆಗಳು ಸ್ಥಗಿತ: ನವದೆಹಲಿ: ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷದ ಒಂಬತ್ತು ಮುಖ್ಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ನಂತರ ಮೇಲ್ಮನವಿ ಪ್ರಾಧಿಕಾರ ಆ ಕ್ರಮವನ್ನು ತೆರವುಗೊಳಿಸಿದ ಪ್ರಸಂಗ ಶುಕ್ರವಾರ ನಡೆದಿದೆ. ಮುಂದಿನ ವಾರ ನಡೆಯುವ ವಿಚಾರಣೆವರೆಗೆ ಖಾತೆಗಳನ್ನು ನಿರ್ವಹಿಸಬಹುದು ಎಂದು ಮೇಲ್ಮನವಿ ಪ್ರಾಧಿಕಾರ ಹೇಳಿದ್ದರಿಂದ ಕಾಂಗ್ರೆಸ್ ನಿರಾಳವಾಯಿತು. ಐಟಿ ಇಲಾಖೆಯ ಕ್ರಮದಿಂದ ಪಕ್ಷದ ಎಲ್ಲ ರಾಜಕೀಯ ಚಟುವಟಿಕೆ ಮೇಲೆ ಪರಿಣಾಮ ಉಂಟಾ ಗುತ್ತದೆಂದು ಕಾಂಗ್ರೆಸ್ ಟೀಕಿಸಿದೆ. ಐಟಿ ಅಧಿಕಾರಿಗಳು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದರು. ಆದರೆ ಇಲಾಖೆಯ ಮೇಲ್ಮನವಿ ಪ್ರಾಧಿಕಾರ (ಟ್ರಿಬ್ಯೂನಲ್) ಅದನ್ನು ರದ್ದುಪಡಿಸಿ 115 ಕೋಟಿ ರೂ. ಹೊಣೆಗಾರಿಕೆ ನಿಗದಿಪಡಿಸಿ ಅದಕ್ಕಿಂತ ಮೇಲಿನ ಹಣ ವೆಚ್ಚ ಮಾಡಲು ಅನುಮತಿ ನೀಡಿದೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್ ತಿಳಿಸಿದ್ದಾರೆ. ಖಾತೆಗಳನ್ನು ಸ್ಥಗಿತಗೊಳಿ ಸಿದರೆ ‘ಚುನಾವಣಾ ಹಬ್ಬದಲ್ಲಿ’ ಭಾಗವಹಿಸಲು ಕಾಂಗ್ರೆಸ್​ಗೆ ಸಾಧ್ಯವಾಗದು ಎಂದು ಐಟಿ ಇಲಾಖೆಯ ಆದೇಶ ಪ್ರಶ್ನಿಸಿದ ಪಕ್ಷದ ನಾಯಕ ವಿವೇಕ್ ತಂಖಾ ಟ್ರಿಬ್ಯೂನಲ್ ಮುಂದೆ ಆತಂಕ ತೋಡಿಕೊಂಡರು. ಬುಧವಾರ ಮುಂದಿನ ವಿಚಾರಣೆ ನಡೆಸಲಿರುವ ಪ್ರಾಧಿಕಾರ ಈ ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.