ನ್ಯೂಸ್

ಪಿಂಚಣಿ ಹೊರೆ ವಿದ್ಯುತ್ ಗ್ರಾಹಕರಿಗೆ ಬರೆ?; ನಿವೃತ್ತರ ವೆಚ್ಚ ಬಳಕೆದಾರರ ಖಾತೆಗೆ

ಮೃತ್ಯುಂಜಯ ಕಪಗಲ್ ಬೆಂಗಳೂರು
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ವಿತರಣ ಸಂಸ್ಥೆ ಉದ್ಯೋಗಿಗಳ ಪಿಂಚಣಿ ಹಾಗೂ ನಿವೃತ್ತಿ ನಂತರದ ಸವಲತ್ತುಗಳ ವೆಚ್ಚವನ್ನು ಗ್ರಾಹಕರ ತಲೆಗೆ ಕಟ್ಟಲು ತೆರೆಮರೆಯಲ್ಲಿ ಯತ್ನ ನಡೆಯುತ್ತಿದೆ.

ಕಳೆದ ಎರಡು ದಶಕಗಳಿಂದಲೂ ಸರ್ಕಾರವೇ ಈ ವೆಚ್ಚ ಭರಿಸುತ್ತಿತ್ತು. ನಿವೃತ್ತ ನೌಕರರ ಪಿಂಚಣಿ ಮತ್ತು ಉಪದಾನ ವೆಚ್ಚ ಭರಿಸಲು ಸಾಧ್ಯವಿಲ್ಲವೆಂದು ಇದೀಗ ಕೈಎತ್ತಿದೆ. ಈ ವೆಚ್ಚವನ್ನು ಗ್ರಾಹಕರ ಖಾತೆಗೆ (ಜಕಾತಿ) ವರ್ಗಾಯಿಸುವ ಸನ್ನಾಹ ನಡೆದಿದೆ. ವಿದ್ಯುತ್ ದರ ಪರಿಷ್ಕರಣೆ ಕುರಿತು ಸೋಮವಾರದಿಂದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಇದೇ ಸಂದರ್ಭದಲ್ಲಿ ಪಿಂಚಣಿ ಇನ್ನಿತರ ಸವಲತ್ತುಗಳ ವೆಚ್ಚ ವಿದ್ಯುತ್ ದರ ಪರಿಷ್ಕರಣೆ/ ಗ್ರಾಹಕರ ಖಾತೆಗೆ ಸೇರಿಸುವಂತೆ ಪ್ರಸ್ತಾಪಿಸಲು ಮುಂದಾಗಿದೆ. ತ್ರಿಪಕ್ಷೀಯ ಒಪ್ಪಂದದ ಪ್ರಕಾರ ನೌಕರರ ಪಿಂಚಣಿ ಮತ್ತು ಇತರ ವೆಚ್ಚವನ್ನು ಸರ್ಕಾರವೇ ಭರಿಸಬೇಕು.

ಈಗಾಗಲೇ ದುಬಾರಿಯಾಗಿರುವ ವಿದ್ಯುತ್ ದರದ ಜತೆಗೆ ಮತ್ತೊಂದು ಹೊರೆ ಹೊರಿಸಲು ಸರ್ಕಾರ ಮುಂದಾಗಿರುವುದಕ್ಕೆ ಗ್ರಾಹಕರು ಆಕ್ಷೇಪಿಸಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಇದನ್ನು ತೀವ್ರವಾಗಿ ವಿರೋಧಿಸಿದೆ. ಗ್ರಾಹಕರಿಗೆ ಭಾರ ಹೊರಿಸಬಾರದು ಎಂದು ಲಿಖಿತವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹಲವು ಗ್ರಾಹಕರ ವೇದಿಕೆಗಳೂ ವಿರೋಧದ ಧ್ವನಿ ಎತ್ತಿವೆ. ಹಿರಿಯ ಗ್ರಾಹಕರೊಬ್ಬರು ಕಾನೂನು ಸಮರಕ್ಕೆ ಇಳಿದಿದ್ದಾರೆ. ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಮುಖೇನ ಹೈಕೋರ್ಟ್​ಗೆ ಮೊರೆ ಹೋಗಿದ್ದು, ರಿಟ್ ಅರ್ಜಿ ಸಲ್ಲಿಸಿ ಕಳೆದ ಏ.23ರಂದು ತಡೆಯಾಜ್ಞೆ ತಂದಿದ್ದಾರೆ.

ಆದರೆ, ತಡೆಯಾಜ್ಞೆಯನ್ನೂ ಮುಚ್ಚಿಟ್ಟು ಕೆಇಆರ್​ಸಿ ವಿಚಾರಣೆಯಲ್ಲಿ ಪ್ರಸ್ತಾಪಿಸಿ, ಅನುಮೋದನೆ ಪಡೆಯಲು ಸಿದ್ಧತೆ ಮಾಡಿಕೊಂಡಿದೆ ಎಂಬ ಬಲವಾದ ಸಂದೇಹ ಗ್ರಾಹಕರನ್ನು ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸಮರವನ್ನು ಕೆಇಎಆರ್​ಸಿ ವಿಚಾರಣೆ ವೇದಿಕೆಗೂ ಕೊಂಡೊಯ್ಯಲು ಸಜ್ಜಾಗಿದ್ದಾರೆ. ತಡೆಯಾಜ್ಞೆ ಚಾಲ್ತಿಯಲ್ಲಿರುವಾಗ ಪಿಂಚಣಿ ವೆಚ್ಚ ಗ್ರಾಹಕರ ಖಾತೆಗೆ ವರ್ಗಾಯಿಸಲು ಕೋರುವುದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಗಮನಸೆಳೆಯುವ ಸಾಧ್ಯತೆಗಳಿವೆ.

ಕೆಪಿಟಿಸಿಎಲ್, ಎಸ್ಕಾಂಗಳ ಸಿಬ್ಬಂದಿ ಪಿಂಚಣಿ ವೆಚ್ಚವಾಯಿತು. ಭವಿಷ್ಯತ್ತಿನಲ್ಲಿ ಖಾಸಗಿ ವಿದ್ಯುತ್ ಕಂಪನಿಗಳ ಸಿಬ್ಬಂದಿ ಪಿಂಚಣಿ ಖರ್ಚು ಕೂಡ ಗ್ರಾಹಕರಿಂದಲೇ ತುಂಬಿಕೊಳ್ಳಬೇಕು ಎಂದಾದರೆ ಗತಿ ಏನು? ಎಂದು ಗ್ರಾಹಕರು ದಿಗಿಲುಗೊಂಡಿದ್ದಾರೆ. ಈಗಾಗಲೇ ಕೆಪಿಟಿಸಿಎಲ್, ಎಸ್ಕಾಂ, ಕೆಪಿಸಿಎಲ್ ಸಿಬ್ಬಂದಿ ವೇತನ ಇನ್ನಿತರ ವೆಚ್ಚದ ಅಂಶಗಳು ಯೂನಿಟ್ ರೂಪದಲ್ಲಿ ಸೇರಿವೆ. ಇದನ್ನು ಸೇರಿಸಿಯೇ ವಿದ್ಯುತ್ ಉತ್ಪಾದನಾ ವೆಚ್ಚ ಲೆಕ್ಕ ಹಾಕಿ ವಿದ್ಯುತ್ ದರ ನಿಗದಿಪಡಿಸಲಾಗುತ್ತದೆ. ಅಲ್ಲದೆ, ಇಂಧನ ವೆಚ್ಚ ಹೊಂದಾಣಿಕೆ ರೂಪದಲ್ಲಿ ಕಾಲ ಕಾಲಕ್ಕೆ ಬಿಲ್​ನಲ್ಲಿ ಏರಿಳಿತವಾಗುತ್ತದೆ.

ಹಿಂದೆ ಏನಾಗಿತ್ತು?: 1999ರಿಂದ 2020ರವರೆಗೆ ಪಿಂಚಣಿಗೆ ಮೊತ್ತವನ್ನು ಸರ್ಕಾರವೇ ಭರಿಸುತ್ತಾ ಬಂದಿದೆ. ಈ ವೆಚ್ಚ ಭರಿಸುವುದು ಕಷ್ಟ ಸಾಧ್ಯವೆಂದು ಆರ್ಥಿಕ ಇಲಾಖೆ ಹಣ ಬಿಡುಗಡೆಗೆ ನಿರಾಕರಿಸಿದೆ. ಕೆಇಆರ್​ಸಿ ಅನುಮೋದನೆ ಸಿಗುವ ತನಕ ಇದೇ ವ್ಯವಸ್ಥೆ ಮುಂದುವರಿಸುವ ಮನವಿಗೂ ಒಪ್ಪಿಲ್ಲ. ಇದರಿಂದಾಗಿ ಎರಡು ವರ್ಷಗಳಿಂದ ಪಿಂಚಣಿ ಮತ್ತಿತರ ವೆಚ್ಚ ಏರುತ್ತಲೇ ಸಾಗಿದ್ದು, ಈ ನಡುವೆ ಸೇವೆಯಿಂದ ನಿವೃತ್ತರಾದ ಕೆಪಿಟಿಸಿಎಲ್, ಎಸ್ಕಾಂ ಸಿಬ್ಬಂದಿ ಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಸುಧಾರಣಾ ಕಾಯ್ದೆಯಂತೆ ರಾಜ್ಯ ಸರ್ಕಾರ ಕೆಪಿಟಿಸಿಎಲ್ ಉದ್ಯಮಗಳು, ನೌಕರರ ಸಂಘಗಳು ನಡುವೆ ತ್ರಿಪಕ್ಷೀಯ ಒಪ್ಪಂದವಾಗಿದೆ. ನಿವೃತ್ತಿ ವೇತನ ನಿಧಿ, ಇತರೆ ಸಿಬ್ಬಂದಿ ನಿಧಿಗಳ ಸಂಗ್ರಹಣೆ, ಪಿಂಚಣಿ ತೀರುವಳಿ ಸಂಬಂಧಿತ ಪ್ರಕ್ರಿಯೆ ನಿರ್ವಹಣೆಗೆ ಶಾಸನಾತ್ಮಕವಾದ ಪಿ ಆಂಡ್ ಜಿ (ಪಿಂಚಣೆ ಮತ್ತು ಉಪದಾನ) ಟ್ರಸ್ಟ್ ಕೂಡ ರಚನೆಯಾಗಿದೆ. ಟ್ರಸ್ಟ್ ಸಲ್ಲಿಸುವ ಪಿಂಚಣಿ ವಂತಿಗೆ ಕೋರಿಕೆಯಂತೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಾ ಬಂದಿದೆ. ಆದರೆ 2021ರ ಮಾರ್ಚ್ ಅಂತ್ಯದವರೆಗೆ 4,819.79 ಕೋಟಿ ರೂ. ಬಿಡುಗಡೆ ಬಾಕಿಯನ್ನು ಸರ್ಕಾರ ಉಳಿಸಿಕೊಂಡಿತ್ತು. ಟ್ರಸ್ಟ್ ನಿರಂತರ ಪತ್ರ ವ್ಯವಹಾರ, ಉನ್ನಾಧಿಕಾರಿಗಳ ಸಭೆ ನಡೆಸಿದೆ. ಬೃಹತ್ ಮೊತ್ತವು ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಭರಿಸುವುದು ಕಷ್ಟ ಸಾಧ್ಯವೆಂದು ಆರ್ಥಿಕ ಇಲಾಖೆ ತಿಳಿಸಿ, ಈ ವೆಚ್ಚವನ್ನು ವಿದ್ಯುತ್ ದರ ಪರಿಷ್ಕರಣೆ, ಗ್ರಾಹಕರ ಖಾತೆಗೆ ವರ್ಗಾಯಿಸಲು ಸೂಚಿಸಿ ಕೈತೊಳೆದುಕೊಂಡಿದೆ. ಸದ್ಯಕ್ಕೆ ಹಿಂದಿನ ಎರಡು ವರ್ಷಗಳ ಪಿಂಚಣಿ ವಂತಿಗೆ ಬಾಕಿ ಮೊತ್ತವೇ 3,353.27 ಕೋಟಿ ರೂ.ಗಳಾಗಿದೆ. ಈ ಹೊರೆ ಇಳಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಕೆಇಆರ್​ಸಿ ಅನುಮತಿ ಪಡೆಯುವ ಧಾವಂತದಲ್ಲಿದೆ.

₹3,353 ಕೋಟಿ ಬಾಕಿ: ಆರ್ಥಿಕ ಇಲಾಖೆ ಕಷ್ಟ ಸಾಧ್ಯವೆಂದು ತಿಳಿಸಿದ ನಂತರ ಕಳೆದ ಎರಡು ವರ್ಷಗಳಿಂದ ಸಿಬ್ಬಂದಿ ಪಿಂಚಣಿ ಮತ್ತಿತರ ವೆಚ್ಚ ಬಾಕಿ ಮೊತ್ತವೇ 3,353.27 ಕೋಟಿ ರೂ.ಗಳಿಗೆ ತಲುಪಿದೆ. ಸರ್ಕಾರ ಭರಿಸಬೇಕಾದ 2021-22 ರಿಂದ 2022-23ವರೆಗಿನ ಬಾಕಿ ಪಿಂಚಣಿ ವಂತಿಗೆ ಮೊತ್ತವನ್ನು 2023-24ನೇ ಸಾಲಿನಿಂದ ಮೂರು ಸಮಾನ ಕಂತುಗಳಲ್ಲಿ ಜಕಾತಿ ದರದಲ್ಲಿ ಕ್ಲೇಮ್ ಮಾಡುವುದು ಅಥವಾ ವರ್ಗಾಯಿಸಲು ಇಂಧನ ಇಲಾಖೆ ಆದೇಶಿಸಿದೆ. ಈ ಪ್ರಸ್ತಾವನೆಗೆ ಕೆಇಆರ್​ಸಿ ಅನುಮೋದನೆ ಪಡೆಯುವ ಉದ್ದೇಶದಿಂದ ‘ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣಾ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಉದ್ಯಮಗಳು ಮತ್ತು ಅದರ ಸಿಬ್ಬಂದಿ ಮತ್ತು ವಿದ್ಯುಚ್ಛಕ್ತಿ ವಿತರಣ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ವರ್ಗಾವಣೆ) ನಿಯಮಗಳು 2002ರ ನಿಯಮ 4 (13)(1)ಕ್ಕೆ’ ತಿದ್ದುಪಡಿ ಮಾಡಿದೆ.

ಕೆಪಿಟಿಸಿಎಲ್, ಎಸ್ಕಾಂ ನೌಕರರ ಪಿಂಚಣಿ, ನಿವೃತ್ತಿ ನಂತರದ ಇತರ ಸವಲತ್ತುಗಳ ವೆಚ್ಚವನ್ನು ಗ್ರಾಹಕರ ಜಕಾತಿಗೆ ಸೇರಿಸಲು ವಿರೋಧವಿದೆ. ಈ ಆದೇಶಕ್ಕೆ ತಡೆಯಾಜ್ಞೆ ಚಾಲ್ತಿಯಲ್ಲಿರುವ ಬಗ್ಗೆ ಕೆಇಆರ್​ಸಿ ವಿಚಾರಣೆಯಲ್ಲಿ ದಾಖಲೆ ಸಹಿತ ಸಲ್ಲಿಸುತ್ತೇವೆ.

| ರಮೇಶಚಂದ್ರ ಲಹೋಟಿ ಅಧ್ಯಕ್ಷ, ಎಫ್​ಕೆಸಿಸಿಐ