ನ್ಯೂಯಾರ್ಕ್: ಲಾಕ್ಡೌನ್ ಹಿನ್ನೆಲೆಯಲ್ಲಿ ಅಮೆರಿಕಾದ ಚಿಕಾಗೋ ಅಕ್ವೇರಿಯಂ ಅನ್ನು ಸಾರ್ವಜನಿಕ ಭೇಟಿಗೆ ರದ್ದು ಮಾಡಲಾಗಿದೆ. ಈ ಮಧ್ಯೆ ಪೆಂಗ್ವಿನ್ ಪಕ್ಷಿಗಳನ್ನು ಅಡ್ಡಾಡಲು ಅವಕಾಶ ನೀಡಿದ್ದು, ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು ಪೆಂಗ್ವಿನ್ಗಳು ತನ್ನು ಉಸ್ತುವಾರಿಗಳನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡಿವೆ.
ಅಕ್ವೇರಿಯಂನಲ್ಲಿನ ಬೆಲುಗಾ ತಿಮಿಂಗಿಲಗಳ ಎದುರಿಗೆ ನಿಂತು ಪೆಂಗ್ವಿನ್ ಒಂದು ಮೌನ ಸಂಭಾಷಣೆ ನಡೆಸಿದೆ. ಉಭಯ ಜೀವಿಗಳ ಮಧ್ಯೆ ಗಾಜಿನ ಪರದೆ ಅಡ್ಡಲಾಗಿದ್ದರೂ ಸಹ ಕಣ್ಣಲ್ಲೇ ಸಂವಹನ ನಡೆಸಿದಂತಿರುವ ಫೋಟೋ- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಶೆಡ್ಡ್ ಅಕ್ವೇರಿಯಂ ಇದನ್ನು ಬಹಿರಂಗ ಪಡಿಸಿದೆ. ಕಳೆದ ವೀಕೆಂಡ್ನಲ್ಲಿ ಅತ್ಯಂತ ವಯಸ್ಸಾದ ವೆಲ್ಲಿಂಗ್ಟನ್ ಹೆಸರಿನ ಪೆಂಗ್ವಿನ್ ತಿಮಿಂಗಿಲವನ್ನು ಭೇಟಿ ಮಾಡಿದೆ ಎಂದು ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದೆ. ಈವರೆಗೂ ವಿಡಿಯೋ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಅಲ್ಲದೆ, ಸಾಕಷ್ಟು ಮೆಚ್ಚುಗೆಯು ಹರಿದುಬರುತ್ತಿವೆ.
ಪೆಂಗ್ವಿನ್ಗಳನ್ನು ಏಕೆ ಅಡ್ಡಾಡಲು ಬಿಟ್ಟಿರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಶೆಡ್ಡ್ ಅಕ್ವೇರಿಯಂ ಸಿಬ್ಬಂದಿ, ಅತಿಥಿಗಳಿಲ್ಲದೆ ಬಣಗುಡುತ್ತಿರುವ ಅಕ್ವೇರಿಯಂನಲ್ಲಿನ ಪ್ರಾಣಿಗಳನ್ನು ಸಕ್ರೀಯವಾಗಿಡಲು ಈ ಸೃಜನಾತ್ಮಕ ಚಟುವಟಿಕೆಯನ್ನು ಕೈಗೊಳ್ಳಾಗಿದೆ. ಪೆಂಗ್ವಿನ್ಗಳನ್ನು ಅಡ್ಡಾಡಲು ಬಿಟ್ಟು, ಅವುಗಳಿಗೆ ಉತ್ತೇಜನ ನೀಡಿ, ಅವುಗಳಲ್ಲಿರುವ ವಿಶಿಷ್ಟತೆಯನ್ನು ತಿಳಿದುಕೊಳ್ಳಲು ಈ ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)