ನ್ಯೂಸ್

ರಾಜ್ಯ ಸರ್ಕಾರದ ವಿರುದ್ಧ ಪೇಜಾವರಶ್ರೀ ತೀವ್ರ ಅಸಮಾಧಾನ: ಕಾರಣ ಇದು…

ಉಡುಪಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಧೋರಣೆ ಹಾಗೂ ನಿಲುವು ಖಂಡಿಸಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತಾಂತರ ಹಾಗೂ ಗೋಹತ್ಯಾ ನಿಷೇಧ ಕಾಯ್ದೆ ಹಿಂಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದೇ ಪೇಜಾವರಶ್ರೀಗಳ ಅಸಮಾಧಾನಕ್ಕೆ ಕಾರಣ. ಸಮಾಜದಲ್ಲಿ ಏರ್ಪಟ್ಟಿದ್ದ ಪ್ರಮುಖ ಎರಡು ಗೊಂದಲ‌ ನಿವಾರಣೆಗೆ ಮತಾಂತರ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿತ್ತು. ಮತಾಂತರ ಹಾವಳಿಯಿಂದ ಕೌಟುಂಬಿಕ ಕಲಹ ಏರ್ಪಟ್ಟು ಒಂದು ಕುಟುಂಬವೇ ಛಿದ್ರವಾಗುವ ಪ್ರಸಂಗ ನಿರ್ಮಾಣವಾಗಿತ್ತು. ಈ ಮತಾಂತರ ಹಾವಳಿ ತಪ್ಪಿಸಲು ಮತಾಂತರ ನಿಷೇಧ ಈ ಹಿಂದಿನ ಸರ್ಕಾರ ಜಾರಿ ಮಾಡಿತ್ತು ಎಂದು ಸ್ವಾಮೀಜಿ ಹೇಳಿದರು.

ಹಾಗೆಯೇ ನಾಲ್ಕು ಗೋವುಗಳನ್ನು ಸಾಕಿ ಅದರಿಂದ ಬಂದ ಹಾಲನ್ನು ಮಾರಾಟ ಮಾಡಿ ಹಲವಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಗೋವುಗಳನ್ನೇ ನಂಬಿ ಬದುಕುವ ಕುಟುಂಬಕ್ಕೆ ಗೋಕಳ್ಳರು ತಲವಾರು ತೋರಿಸಿ ಗೋವುಗಳನ್ನು ಕದ್ದೊಯ್ಯುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಹಿಂದಿನ ಸರ್ಕಾರ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿ ಮಾಡಿತ್ತು ಎಂದ ಸ್ವಾಮೀಜಿ, ಈಗಿನ ಸರ್ಕಾರ ಈ ಎರಡೂ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದು ಆತಂಕಕಾರಿ ಎಂದು ಹೇಳಿದ್ದಾರೆ.

ಈ ಎರಡು ಕಾಯ್ದೆ ಹಿಂಪಡೆಯುವ ದುಸ್ಸಾಹಸ ಮಾಡಬಾರದು. ರಾಜ್ಯ ಸರ್ಕಾರ ಜನಪ್ರತಿನಿಧಿಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಬೇಕು. ಕಾಯ್ದೆ ಹಿಂಪಡೆಯುವ ದುಸ್ಸಾಹಸಕ್ಕೆ ಕೈಹಾಕದೆ ತಟಸ್ಥರಾಗಿರಿ ಎಂದೂ ಸ್ವಾಮೀಜಿ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.