ನ್ಯೂಸ್

ಪೇಟಿಎಂಗೆ ಆರ್‌ಬಿಐ ನಿರ್ಬಂಧ.. ಕೇಂದ್ರದ ಹಸ್ತಕ್ಷೇಪ ಸಾಧ್ಯವಿಲ್ಲ..!

ನವದೆಹಲಿ: ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಮೇಲೆ ಆರ್‌ಬಿಐ ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಕಂಪನಿಯು ಅದರಿಂದ ಹೊರಬರಲು ಮಾರ್ಗಗಳನ್ನು ಹುಡುಕುತ್ತಿದೆ. ಕಂಪನಿಯ ಸಿಇಒ ವಿಜಯ್ ಶೇಖರ್ ಶರ್ಮಾ ಅವರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

ಅವರು ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ಬಹಿರಂಗಪಡಿಸಿವೆ.

ಕೇವಲ 10 ನಿಮಿಷಗಳ ಕಾಲ ಸಭೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಈ ವಿಚಾರದಲ್ಲಿ ಕೇಂದ್ರದ ಹಸ್ತಕ್ಷೇಪ ಏನೂ ಇಲ್ಲ ಎಂದು ಹಣಕಾಸು ಸಚಿವರು ಹೇಳಿರುವುದಾಗಿ ವರದಿಯಾಗಿದೆ. ಆರ್‌ಬಿಐನಲ್ಲಿಯೇ ಸಮಸ್ಯೆ ಬಗೆಹರಿಸಿ, ಅವರ ಮಾರ್ಗಸೂಚಿಯಂತೆ ಕ್ರಮಕೈಗೊಳ್ಳಬೇಕು ಎಂದು ನಿರ್ಮಲಾ ಸೀತಾರಾಮನ್​ ಸೂಚಿಸಿದಂತಿದೆ. ಮತ್ತೊಂದೆಡೆ, ವಿಜಯ್ ಶರ್ಮಾ ಅವರು ನಿಯಂತ್ರಕ ನಿರ್ಬಂಧಗಳ ಬಗ್ಗೆ ಚರ್ಚಿಸಲು ಆರ್‌ಬಿಐ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗಷ್ಟೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ಆರ್ ಬಿಐ ಶಾಕ್ ನೀಡಿದ್ದು ಗೊತ್ತೇ ಇದೆ. ಫೆಬ್ರವರಿ 29 ರ ನಂತರ, ಯಾವುದೇ ಗ್ರಾಹಕರು ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ ಅಥವಾ ಟಾಪ್ ಅಪ್‌ಗಳನ್ನು ಮಾಡಬಾರದು ಎಂದು ನಿರ್ದೇಶಿಸಲಾಗಿದೆ. ಸಮಗ್ರ ಸಿಸ್ಟಮ್ ಆಡಿಟ್ ಮತ್ತು ಬಾಹ್ಯ ಲೆಕ್ಕ ಪರಿಶೋಧಕರ ವರದಿಗಳನ್ನು ಅನುಸರಿಸಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬ್ಯಾಂಕ್‌ನಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಪತ್ತೆಯಾಗಿದೆ ಎಂದು ಆರ್‌ಬಿಐ ಹೇಳಿದೆ.

ಏತನ್ಮಧ್ಯೆ, ಇಡಿ ಮತ್ತು ಹಣಕಾಸು ಗುಪ್ತಚರ ಘಟಕ (ಎಸ್‌ಐಯು) ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಮೇಲಿನ ಇತ್ತೀಚಿನ ನಿರ್ಬಂಧಗಳಿಗೆ ಸಂಬಂಧಿಸಿದ ವರದಿಯನ್ನು ನೀಡುವಂತೆ ಆರ್‌ಬಿಐಗೆ ಕೇಳಿದೆ. ಈ ಬೆಳವಣಿಗೆಗಳಿಂದ ಕಂಪನಿಯ ಷೇರುಗಳು ಇತ್ತೀಚೆಗೆ ತೀವ್ರವಾಗಿ ಕುಸಿದಿವೆ. ಮತ್ತೊಂದೆಡೆ ಹಲವಾರು ಪ್ರಮುಖ ಕಂಪನಿಗಳ ಸಂಸ್ಥಾಪಕರು ಪೇಟಿಎಂ ಮೇಲಿನ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.