ನ್ಯೂಸ್

Laddu Controversy: ಒಂದೇ ಮಾತಿನಲ್ಲಿ ನಟ ಕಾರ್ತಿ ಬಾಯಿ ಮುಚ್ಚಿಸಿದ ಡಿಸಿಎಂ ಪವನ್ ಕಲ್ಯಾಣ್​

ಆಂಧ್ರಪ್ರದೇಶ: ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ತಿರುಪತಿ ತಿಮಪ್ಪನ ದೇಗುಲದ ಲಡ್ಡು ಪ್ರಸಾದದಲ್ಲಿ ಕಲಬೆರೆಕೆಯಾಗಿದೆ. ಪ್ರಸಾದ ತಯಾರಿಕೆಯಲ್ಲಿ ಮೀನಿನ ಎಣ್ಣೆ, ದನದ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂಬ ವಿಷಯ ಸದ್ಯ ದೇಶದಲ್ಲಿ ದೊಡ್ಡ ಸಂಚಲನವನ್ನೇ ಹುಟ್ಟುಹಾಕಿದ್ದು, ಇದೀಗ ಭಾರೀ ವಿವಾದಕ್ಕೆ ತಿರುಗಿದೆ. ದೇವರ ಪ್ರಸಾದದ ಪಾವಿತ್ರ್ಯತೆ ಹಾಳು ಮಾಡಿರುವವರ ವಿರುದ್ಧ ಕಠಿಣ ಶಿಕ್ಷೆಯಾಗಬೇಕು ಎಂದು ಭಕ್ತರು ಆಗ್ರಹಿಸಿದ ಬೆನ್ನಲ್ಲೇ ಇದೀಗ ಪ್ರಕರಣ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಇನ್ನು ಆಂಧ್ರಪ್ರದೇಶ ಸರ್ಕಾರ ಎಸ್​ಐಟಿ ತಂಡ ರಚನೆ ಮಾಡಿದ್ದು, ಕೇಸ್​ನ ತನಿಖೆ ಚುರುಕುಗೊಳಿಸುವಂತೆ ಆದೇಶಿಸಿದೆ.

ಇನ್ನು ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಅನೇಕ ಸ್ಟಾರ್​ ನಟ-ನಟಿಯರು ತಮ್ಮ ವೈಯಕ್ತಿಕ ಹೇಳಿಕೆ, ಅಭಿಪ್ರಾಯಗಳನ್ನು ಬಹಿರಂಗವಾಗಿ ವೇದಿಕೆ ಮತ್ತು ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ವೇಳೆ ತಮ್ಮ ಹೊಸ ಚಿತ್ರವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಮಿಳು ನಟ ಕಾರ್ತಿ, ಲಡ್ಡು ಬಗ್ಗೆ ಪರದೆಯ ಮೇಲೆ ಮೂಡಿಬಂದ ವ್ಯಂಗ್ಯ ಚಿತ್ರ ನೋಡಿ ಹಾಸ್ಯಸ್ಪದವಾಗಿ ಮಾತನಾಡಿದರು. ಈ ವಿಷಯಕ್ಕೆ ನೆಟ್ಟಿಗರು ನಟನ ವಿರುದ್ಧ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಚಿತ್ರನಟ ಹಾಗೂ ಡಿಎಸಿಎಂ ಪವನ್ ಕಲ್ಯಾಣ್​, ಕಾರ್ತಿಗೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಪ್ರಸ್ತುತ 11 ದಿನಗಳ ಕಾಲ ಪ್ರಾಯಶ್ಚಿತ್ತ ದೀಕ್ಷೆಯನ್ನು ಪಡೆದಿರುವ ಪವನ್ ಕಲ್ಯಾಣ್​, ದೇವಾಲಯದ ಶುದ್ಧೀಕರಣದ ಕೆಲಸದಲ್ಲಿ ತೊಡಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಸಿನಿಮಾ ಪ್ರೀ-ರಿಲೀಸ್ ಈವೆಂಟ್​ ಕಾರ್ಯಕ್ರಮವೊಂದರಲ್ಲಿ ನಟ ಕಾರ್ತಿ ತಿರುಪತಿ ತಿರುಮಲ ದೇವಾಲಯದ ಲಡ್ಡುವನ್ನು ಗೇಲಿ ಮಾಡಿ, ಮಾತನಾಡಿದ್ದಾರೆ. ತಿರುಮಲ ಲಡ್ಡು ಬಗ್ಗೆ ಮಾತನಾಡುವ ಮುನ್ನ ನೂರು ಬಾರಿ ಯೋಚಿಸಬೇಕು. ಇದು ತಮಾಷೆಯ ವಿಷಯವೇ ಅಲ್ಲ. ನಾನು ನಿಮ್ಮನ್ನು ನಟರಾಗಿ ಗೌರವಿಸುತ್ತೇನೆ ಆದರೆ ನೀವು ಸನಾತನ ಧರ್ಮದ ವಿರುದ್ಧ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದನ್ನು ಮೊದಲು ನಿಲ್ಲಿಸಬೇಕು" ಎಂದು ಖಡಕ್ ವಾರ್ನಿಂಗ್ ರವಾನಿಸಿದ್ದಾರೆ. ಸದ್ಯ ಪವನ್ ಹೇಳಿಕೆಗೆ ಹಲವರು ಮೆಚ್ಚುಗೆ ಸೂಚಿಸಿದ್ದು, ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).