ನ್ಯೂಸ್

ದೇಹ, ಮನಸ್ಸಿನ ಚೈತನ್ಯದ ಮುಕ್ತ ಪ್ರವಾಹಕ್ಕೆ ಪವನಮುಕ್ತಾಸನ

ಪವನ ಮುಕ್ತಾಸನವನ್ನು ಸೂಕ್ಷ್ಮ ವ್ಯಾಯಾಮ ಎಂದೂ ಕರೆಯಲಾಗುವುದು. ಪವನ ಎಂದರೆ ‘ವಾಯು’ ಅಥವಾ ‘ಪ್ರಾಣ’ ಎಂದರ್ಥ. ಮುಕ್ತ ಎಂದರೆ ಬಿಡುಗಡೆ. ಆಸನ ಎಂದರೆ ಭಂಗಿ. ಆದ್ದರಿಂದ ಪವನ ಮುಕ್ತಾಸನ ಎಂದರೆ ದೇಹ ಮತ್ತು ಮನಸ್ಸಿನ ಚೈತನ್ಯದ ಮುಕ್ತಪ್ರವಾಹಕ್ಕೆ ಅಡ್ಡಿ ಉಂಟು ಮಾಡುವ ತಡೆಗಳ ನಿವಾರಣೆ ಮಾಡುವಂಥ ಸಾಮರ್ಥ್ಯವಿರುವ ಸ್ಥಿತಿಯಾಗಿದೆ. ಕೆಲವೊಮ್ಮೆ ನಮ್ಮ ದೇಹದ ಅಸಮರ್ಪಕ ಭಂಗಿಯಿಂದ, ದೈಹಿಕ ಕ್ರಿಯೆಗಳ ಕ್ಷೋಭೆಯಿಂದ, ಮಾನಸಿಕ ಇಲ್ಲವೇ ಭಾವನಾತ್ಮಕ ತೊಂದರೆಗಳಿಂದ ಅಥವಾ ಸಮತೋಲನ ಜೀವನ ಕ್ರಮದಿಂದ ಪ್ರಾಣ ಚೈತನ್ಯವು ಪ್ರವಹಿಸುವುದಕ್ಕೆ ಅಡಚಣೆಯಾಗುತ್ತದೆ. ಪ್ರಾರಂಭಸ್ಥಿತಿಯಲ್ಲಿ ಇದು ಮಾಂಸಖಂಡಗಳ ಬಿಗುವು, ಪೆಡಸುತನ, ಅಸಮರ್ಪಕ ರಕ್ತಚಲನೆ ಇತ್ಯಾದಿ ಸಣ್ಣಪುಟ್ಟ ಲೋಪದೋಷಗಳ ಮೂಲಕ ಪ್ರಕಟವಾಗುತ್ತದೆ. ಆದರೆ ಈ ಪ್ರಾಣ ಚೈತನ್ಯ ಪ್ರವಾಹಕ್ಕೆ ಅಡ್ಡಿಯು ತೀವ್ರವಾದಾಗ ಕೈಕಾಲು, ಇಲ್ಲವೆ ಕೀಲು ಅಥವಾ ಅವಯವ ಅಸಮರ್ಪಕವಾಗಿ ಕೆಲಸ ಮಾಡಬಹುದು. ನಿಷ್ಕ್ರಿಯವೂ ಆಗಬಹುದು. ಪವನ ಮುಕ್ತಾಸನದ ಕ್ರಮಬದ್ಧ ಅಭ್ಯಾಸವು ದೇಹದಲ್ಲಿ ಪ್ರಾಣ ಚೈತನ್ಯದ ಪ್ರವಾಹಕ್ಕೆ ಇರುವ ಅಡ್ಡಿಯನ್ನು ನಿವಾರಿಸುವುದಲ್ಲದೆ ಹೊಸ ಅಡಚಣೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಈ ವಿಧದಿಂದ ಇದು ದೇಹದಲ್ಲಿ ಚೈತನ್ಯ ಪ್ರವಾಹವನ್ನು ನಿಯಂತ್ರಿಸಿ ಸಮಸ್ಥಿತಿಗೆ ತರುವ ಮೂಲಕ ದೇಹಕ್ಕೆ ಪೂರ್ಣ ಆರೋಗ್ಯವನ್ನು ಒದಗಿಸುತ್ತದೆ.

ಯೋಗ ಜೀವನಕ್ಕೆ ಬಹು ಭದ್ರ ತಳಹದಿಯನ್ನು ಒದಗಿಸುವ ಸರಣಿಯಾಗಿ ಪವನ ಮುಕ್ತಾಸನವು ಅತ್ಯವಶ್ಯವಾಗಿದೆ. ಇದು ಎಲ್ಲ ಪ್ರಮುಖ ಕೀಲುಗಳನ್ನು ಮುಕ್ತಗೊಳಿಸುತ್ತದೆ ಮತ್ತು ದೇಹದ ಸ್ನಾಯುಗಳನ್ನು ಸಡಿಲಿಸುತ್ತದೆಯಾದ್ದರಿಂದ ಒಂದು ಪೂರ್ವ ಸಿದ್ಧತಾ ಆಸನವಾಗಿ ಇದು ಬಹಳ ಉಪಯುಕ್ತ. ಈ ಪವನಮುಕ್ತಾಸನ ಸರಣಿಯ ಆಸನಗಳನ್ನು ಯಾರು ಬೇಕಾದರೂ ಮಾಡಬಹುದು. ಹೊಸಬರಿರಬಹುದು ಇಲ್ಲವೇ ನುರಿತವರಾಗಿರಬಹುದು. ಚಿಕ್ಕವರು, ವಯಸ್ಸಾದವರು, ಕಾಯಿಲೆಯವರು-ಚೇತರಿಸಿಕೊಳ್ಳುವವರೂ ಆಗಿರಬಹುದು. ಈ ಆಸನಗಳ ಅಭ್ಯಾಸವು ಸರಳ, ಆರಾಮದಾಯಕ ಮತ್ತು ಸುಲಭ ಎಂಬ ಕಾರಣಕ್ಕಾಗಿ ಇವುಗಳನ್ನು ಉಪೇಕ್ಷೆ ಮಾಡಕೂಡದು ಮತ್ತು ಲಘುವಾಗಿ ಪರಿಗಣಿಸಕೂಡದು.

ಮನಸ್ಸು-ದೇಹ-ರೋಗ ಮುಕ್ತಿ: ಬಹುತೇಕ ಆಧುನಿಕ ರೋಗಗಳು ಮನೋದೈಹಿಕ ಸ್ವರೂಪದವು. ಈ ರೋಗಗಳಿಗಾಗಿ ಸೇವಿಸುವ ಔಷಧಗಳು ಕೇವಲ ರೋಗಲಕ್ಷಣಗಳನ್ನು ನಿವಾರಿಸುತ್ತವೆಯೇ ವಿನಃ ರೋಗಗಳನ್ನು ಬೇರು ಸಹಿತ ಕಿತ್ತೊಗೆಯುವುದಿಲ್ಲ. ಈ ಆಸನಗಳನ್ನು ಯಾವ ಸ್ಪರ್ಧಾತ್ಮಕ ಭಾವನೆ ಇಲ್ಲದೆ ಪ್ರಸನ್ನ ಮನಸ್ಥಿತಿಯಿಂದ ಮತ್ತು ಸಮರ್ಪಕವಾಗಿ ಅಭ್ಯಾಸ ಮಾಡಿದರೆ ದೇಹದ ಮಾಂಸಖಂಡಗಳು ವಿಶ್ರಾಮಸ್ಥಿತಿಗೆ ಬರುವುದಲ್ಲದೆ ಈ ವಿಶ್ರಾಮ ಭಾವವು ಮಿದುಳನ್ನು ಪ್ರಚೋದಿಸುತ್ತದೆ; ತನ್ಮೂಲಕ ಮನಸಸನ್ನೂ ವಿಶ್ರಾಮಸ್ಥಿತಿಗೆ ತರುತ್ತದೆ. ಉಸಿರಾಟ ಮತ್ತು ಅದರ ಮೇಲಿನ ನಮ್ಮ ಗಮನವನ್ನು ಮೇಳವಿಸುವುದರಿಂದಾಗಿ ಮನಸ್ಸಿನ ಅವಧಾನಶಕ್ತಿಯು ಜಾಗೃತವಾಗುತ್ತದೆ. ತತ್ಪಲವಾಗಿ ಮನಸ್ಸು ಒತ್ತಡ ಉದ್ವೇಗಗಳಿಗೆ ಒಳಗಾಗುವುದಿಲ್ಲ. ಇದರಿಂದಾಗಿ ಈ ಆಸನಗಳಲ್ಲಿ ದೈಹಿಕಕ್ಕಿಂತ ಮಾನಸಿಕ ಅಂಶವೇ ಪ್ರಧಾನ ಎಂಬುದು ಗೋಚರವಾಗುತ್ತದೆ. ಈ ಆಸನಗಳ ಸಕ್ರಮ ಅಭ್ಯಾಸದಿಂದ ಮನಸ್ಸು ವಿಶ್ರಾಮ ಸ್ಥಿತಿಗೆ ಬರುತ್ತದೆ. ಕ್ರಿಯಾಶೀಲ ನರಗಳು ಹಾರ್ಮೋನ್ ಕ್ರಿಯೆಗಳು ಮತ್ತು ಶರೀರದ ಆಂತರಿಕ ಅವಯವಗಳು ಸರಿಯಾಗುತ್ತವೆ. ಮಹತ್ತರವಾದ ಪ್ರತಿಬಂಧಕ ಹಾಗೂ ನಿವಾರಣಾತ್ಮಕ ಅಂಶಗಳನ್ನು ಹೊಂದಿವೆ.

ಸಮತಲ ಸ್ಥಿತಿ: ಇದು ಕುಳಿತುಮಾಡುವ ಆರಂಭದ ಸ್ಥಿತಿಯಾಗಿದೆ.

ಅಭ್ಯಾಸ ಕ್ರಮ: ಕಾಲುಗಳನ್ನು ನೇರವಾಗಿ ಚಾಚಿ ಕೂರೋಣ. ಕಾಲಿನ ಹೆಬ್ಬೆರಳುಗಳು, ಹಿಮ್ಮಡಿಯ ಗಂಟುಗಳು ಒಂದಕ್ಕೊಂದು ತಾಗಿರಲಿ. ಮೊಣಕಾಲು, ಮಂಡಿಯ ಚಿಪ್ಪನ್ನು ಬಿಗಿಗೊಳಿಸಿ ತೊಡೆಯ ಸ್ನಾಯುಗಳನ್ನು ಒಳಗೆ ಸೆಳೆದುಕೊಳ್ಳುತ್ತಾ ಬಿಗಿಗೊಳಿಸೋಣ. ಬೆನ್ನು, ಕುತ್ತಿಗೆ, ತಲೆಯಭಾಗ ನೇರವಾಗಿರಲಿ. ಕೈಗಳೆರಡನ್ನೂ ತೊಡೆಯ ಪಕ್ಕ ಹಸ್ತ ಎದುರು ಮುಖವಾಗಿರುವಂತೆ ನೆಲಕ್ಕೆ ಊರೋಣ. ಭುಜಗಳನ್ನು ಹಿಂದಕ್ಕೆ ಜಗ್ಗಿ ಎದೆಯ ಭಾಗವನ್ನು ವಿಸ್ತರಿಸೋಣ. ಮುಖದಲ್ಲಿ ಪ್ರಸನ್ನತೆಯಿರಲಿ.

ಆರಾಂಸೆ: ಕುಳಿತು ಆರಾಂಸೆ ಎಂದಾಗ ಎರಡೂ ಕಾಲುಗಳನ್ನೂ ಸ್ವಲ್ಪ ವಿಸ್ತರಿಸಿ ಕೈಗಳನ್ನು ಹಿಂದಕ್ಕೆ ಚಾಚಿ. ಹಸ್ತಗಳನ್ನು ನೆಲಕ್ಕೆ ಆಸರೆಯಾಗಿ ಊರಿ. ಶರೀರದ ಯಾವುದೇ ಭಾಗಕ್ಕೆ ಬಿಗಿ ಸೆಳೆತವಿಲ್ಲದಂತೆ ಸ್ವಲ್ಪ ಹಿಂದಕ್ಕೆ ಬಾಗಿ ಆರಾಮವಾಗಿ ಕೂರಬೇಕು.

ಲಾಭಗಳು: ಈ ಸ್ಥಿತಿಯು ಕುಳಿತು ಮಾಡುವ ಪವನ ಮುಕ್ತಾಸನದಲ್ಲಿ ಸ್ಥಿರತೆ ಹಾಗೂ ಸುಖದ ಪರಿಣಾಮ ಕಾಣಲು ಸಹಕಾರಿ.