ತುಮಕೂರು: ಸಿದ್ದಗಂಗಾ ಮಠಕ್ಕೆ ನೂತನ ಪಟ್ಟಾಧಿಕಾರಿಗಳ ನೇಮಕ ಕಾರ್ಯಕ್ರಮ ಇಂದು ಸರಳವಾಗಿ ನಡೆಯಲಿದ್ದು, ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿದೆ.
ನೂತನವಾಗಿ ಆಯ್ಕೆಯಾಗಿರುವ ಮೂವರಿಗೂ ಇಂದು ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ನಡೆಯಲಿದೆ. ಸಿದ್ದಗಂಗಾ ಮಠದ ಆಡಳಿತ ಮಂಡಳಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿದೆ.
ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್, ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಉತ್ತರಾಧಿಕಾರಿಯಾಗಿ ಹರ್ಷ ಹಾಗೂ ವಿಜಯಪುರ ಬಸವಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ಗೌರಿ ಕುಮಾರ್ ಅವರನ್ನು ಸಿದ್ದಗಂಗಾ ಮಠದ ಆಡಳಿತ ಮಂಡಳಿ ನೇಮಕ ಮಾಡಿದೆ.
ಇಂದು ಬಸವ ಜಯಂತಿ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಶ್ರೀ ಮಠದ ಭಕ್ತಾದಿಗಳು, ಸಾರ್ವಜನಿಕರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿದ್ದಗಂಗಾ ಮಠದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ಆರಂಭವಾಗಿದೆ. ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಮೂಲಕ ಆರಂಭವಾಗಿದೆ.
ಈ ವಿಶೇಷ ಪೂಜೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಸೇರಿ ಅನೇಕ ಮಠಾಧೀಶರುಗಳು ಭಾಗಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)