ನ್ಯೂಸ್

"ನನ್ನ ಜೀವ ಹೋದ್ರೆ, ಅದಕ್ಕೆ ಅವರೇ ಹೊಣೆ"! ಸಾವಿಗೂ ಮುನ್ನ ರೋಗಿ ಕಳುಹಿಸಿದ್ದ ವಾಯ್ಸ್​ ಮೆಸೇಜ್​ ವೈರಲ್​ | Patient

ಕೇರಳ: ಐದು ದಿನಗಳಿಂದ ಆಸ್ಪತ್ರೆಗೆ ಎದೆ ಸಂಬಂಧಿತ ಕಾಯಿಲೆಯಿಂದ ದಾಖಲಾಗಿದ್ದ ವ್ಯಕ್ತಿ, ಕಡೆಗೂ ಚಿಕಿತ್ಸೆ ಸಿಗದೆ ದುರಂತವಾಗಿ ಅಂತ್ಯ ಕಂಡ ಘಟನೆ ಕೇರಳದ ತಿರುವನಂತಪುರಂನಲ್ಲಿ (Patient Dies) ಸಂಭವಿಸಿದೆ.

ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡದೆ, ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ. ಮೃತ ರೋಗಿಯನ್ನು ಕೊಲ್ಲಂನ ಪನ್ಮನ ಮೂಲದ ವೇಣು (48) ಎಂದು ಗುರುತಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿ ತನಕ್ಕೆ ಆಟೋ ಚಾಲಕ ವೇಣು ಸಾವಿಗೀಡಾಗಿದ್ದಾಗಿ ವರದಿಯಾಗಿದೆ.

ಶುಕ್ರವಾರ (ಅ.31) ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಕೊಲ್ಲಂನಿಂದ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾದ ವೇಣು, ಐದು ದಿನಗಳಿಂದ ಆಸ್ಪತ್ರೆಯಲ್ಲಿಯೇ ಇದ್ದರೂ ಯಾವೊಬ್ಬ ವೈದ್ಯನೂ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಲಿಲ್ಲ ಎಂಬ ಗಂಭೀರ ಆರೋಪಗಳು ವೇಣು ಸಾಯುವ ಮುನ್ನ ಕಳುಹಿಸಿರುವ ವಾಯ್ಸ್​ ಮೆಸೇಜ್​ನಲ್ಲಿದೆ. ಸಂಜೆ ತಮ್ಮ ಸ್ನೇಹಿತನಿಗೆ ವಾಯ್ಸ್​ ನೋಟ್​ ಕಳುಹಿಸಿರುವ ವೇಣು, ಅದೇ ದಿನ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಏನಿದೆ ವಾಯ್ಸ್​ ನೋಟ್​ನಲ್ಲಿ?

"ನನ್ನ ಸಾವಿಗೆ ಆಸ್ಪತ್ರೆಯವರೇ ನೇರ ಹೊಣೆ. ಇಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಏನನ್ನಾದರೂ ಕೇಳಿದರೆ, ಯಾರೂ ಉತ್ತರಿಸುವುದಿಲ್ಲ. ಬಿಳಿ ಬಟ್ಟೆಯಲ್ಲಿರುವ ಮಂದಿಯನ್ನು ಪ್ರಶ್ನಿಸಿದರೆ, ಅವರು ನಾಯಿಗಿಂತ ಕಡೆಯಾಗಿ ನೋಡ್ತಾರೆ. ಎಲ್ಲೆಡೆ ಲಂಚವಿದೆ. 5 ದಿನಗಳ ನಂತರವೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಸಡ್ಡೆ ತೋರಿದ್ಯಾಕೆ ಅನ್ನೋದು ನನಗೆ ಅರ್ಥವಾಗುತ್ತಿಲ್ಲ. ನನ್ನನ್ನು ಪರೀಕ್ಷಿಸಲು ಬಂದ ವೈದ್ಯರನ್ನು ಹಲವಾರು ಬಾರಿ ಕೇಳಿದ ನಂತರವೂ, ಚಿಕಿತ್ಸೆ ಯಾವಾಗ ಶುರುವಾಗುತ್ತದೆ ಎಂಬ ಖಚಿತತೆಯೇ ಅವರಿಗಿರಲಿಲ್ಲ" ಎಂದಿದ್ದಾರೆ.

"ಸಾಮಾನ್ಯ ಜನರಿಗೆ ದೊಡ್ಡ ಆಶ್ರಯವಾಗಬೇಕಾದ ಆಸ್ಪತ್ರೆಯಲ್ಲಿ ಹೀಗಾದರೆ ಹೇಗೆ? ಈ ಸ್ಥಳ ನರಕವಾಗಿ ಬದಲಾಗುತ್ತಿದೆ. ನನ್ನ ಜೀವಕ್ಕೆ ಏನಾದರೂ ಸಂಭವಿಸಿದರೆ, ಅದು ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯತೆಯೇ ಕಾರಣ" ಎಂದು ವೇಣು ಸಾಯುವ ಮುನ್ನ ಕಳುಹಿಸಿದ ವಾಯ್ಸ್​ ಮೆಸೇಜ್​ ಸದ್ಯ ಪೊಲೀಸರನ್ನು ತಲುಪಿದೆ. ಇದನ್ನು ಆಧಾರವಾಗಿ ಇಟ್ಟುಕೊಂಡಿರುವ ಖಾಕಿ ದೂರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದೆ,(ಏಜೆನ್ಸೀಸ್).