ನ್ಯೂಸ್

ಅಫ್ಘಾನಿಸ್ತಾನ ವಿಷಯದಲ್ಲಿ ಅಮೆರಿಕದ ಗುರಿ ಈಡೇರಿದೆ, ಆದರೆ...: ವಿಜಯವಾಣಿ ಕ್ಲಬ್​ನಲ್ಲಿ ಪಾರ್ಥಸಾರಥಿ-ಪ್ರೇಮಶೇಖರ ವಿಶ್ಲೇಷಣೆ

ಬೆಂಗಳೂರು: ಅಫ್ಘಾನಿಸ್ತಾನದಲ್ಲಿನ ಘರ್ಷಣೆ, ಅಲ್ಲೋಲ-ಕಲ್ಲೋಲ ಕುರಿತು ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್ ಸಂವಾದ ನಡೆಯುತ್ತಿದ್ದು, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರೂ ಆಗಿರುವ ಮಾಜಿ ರಾಯಭಾರಿ ಪಾರ್ಥಸಾರಥಿ ಹಾಗೂ ರಾಜಕೀಯ ವಿಶ್ಲೇಷಕ ಪ್ರೇಮಶೇಖರ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕರ ಪ್ರಶ್ನೆಗಳಿಗೂ ಪ್ರತಿಕ್ರಿಯಿಸುತ್ತಿದ್ದಾರೆ.

ಅಫ್ಘಾನಿಸ್ತಾನಕ್ಕಾಗಿ ಅಮೆರಿಕ 20 ವರ್ಷಗಳಲ್ಲಿ 3 ಟ್ರಿಲಿಯನ್ ಡಾಲರ್ ಖರ್ಚು ಮಾಡಿದೆ, 2442 ಸೈನಿಕರನ್ನು ಕಳೆದುಕೊಂಡಿದ್ದೆ. ಇಷ್ಟಾದರೂ ಮತ್ತೆ ಅದೇ ತಾಲಿಬಾನಿಗೆ ವಾಪಸ್ ಬಿಟ್ಟುಕೊಟ್ಟು ಹೋಗಿದೆ. ಇದಕ್ಕೆ ಪ್ರಮುಖ ಕಾರಣ ಮಾನಸಿಕ ದೃಢತೆ. ಯುದ್ಧ ರಣರಂಗದಲ್ಲಿ ನಡೆಯುವ ಮೊದಲು ಮಾನಸಿಕವಾಗಿ ನಡೆಯುತ್ತದೆ. ಆದರೆ ಅಫ್ಘಾನಿಸ್ತಾನ ಮನಸಿನಲ್ಲಿ ದೃಢನಿಶ್ಚಯ ಇಲ್ಲದೆ ಶರಣಾಗಿದೆ ಎಂದು ಪ್ರೇಮಶೇಖರ ಅಭಿಪ್ರಾಯ ಪಟ್ಟಿದ್ದಾರೆ.

ತಾಲಿಬಾನ್​ ಸಣ್ಣ ಅವಧಿಯಲ್ಲಿ ಕಾಬೂಲನ್ನು ಹಿಡಿತಕ್ಕೆ ತೆಗೆದುಕೊಂಡಿದ್ದು ಅಚ್ಚರಿ ಏನಲ್ಲ. ಪ್ರೆಸಿಡೆಂಟ್ ಬುಷ್ ಇದನ್ನು ಶುರು ಮಾಡಿದ್ದು. ತಾಂತ್ರಿಕವಾಗಿ ಅಷ್ಟೇನೂ ಸಮರ್ಥವಲ್ಲದ ತಾಲಿಬಾನ್​ ಮುಂದೆ ಪ್ರಪಂಚದ ಸೂಪರ್ ಪವರ್ ಎನಿಸಿರುವ ಅಮೆರಿಕ ತನ್ನ ಪವರ್ ಹಿಂದೆಗೆದುಕೊಂಡಿದೆ. ಸೂಪರ್ ಪವರ್​ ಆಗಿರುವ ಅಮೆರಿಕ ಹಾಗೆ ಹಿಂಪಡೆಯಬಾರದಿತ್ತು ಎಂದು ಪಾರ್ಥಸಾರಥಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಗುರಿ ಈಡೇರಿದೆ ಎಂಬುದನ್ನು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಮುಖ್ಯ ಗುರಿ ಇದ್ದಿದ್ದು ಅಲ್​ಖೈದಾ. ಈ ಮೂಲಕ ಅವರು ಅದನ್ನು ಈಡೇರಿಸಿಕೊಂಡಿದ್ದಾರೆ. ಆದರೆ ಸೂಪರ್ ಪವರ್​ ಆಗಿರುವ ಅಮೆರಿಕ ಪವರ್​ ಹಿಂಪಡೆಯಬಾರದಿತ್ತು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಸಂವಾದ ಆಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.