ನ್ಯೂಯಾರ್ಕ್: ಬೃಹತ್ ಕಂಟೈನರ್ ಹಡಗು ಡಿಕ್ಕಿ ಹೊಡೆದ ಪರಿಣಾಮ ಯುನೈಟೆಡ್ ಸ್ಟೇಟ್ಸ್, ಮೇರಿಲ್ಯಾಂಡ್ನ ಬಾಲ್ಟಿಮೋರ್ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್ನ ಬಹು ಭಾಗ ಕುಸಿದು ಬಿದ್ದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಯುಎಸ್ ಸ್ಥಳೀಯ ಕಾಲಮಾನ ತಡರಾತ್ರಿ 1.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಈ ಘಟನೆಯನ್ನು "ಸಾಮೂಹಿಕ ಅಪಘಾತ" ಎಂದು ಬಾಲ್ಟಿಮೋರ್ನ ಅಗ್ನಿಶಾಮಕ ಇಲಾಖೆ ಕರೆದಿದೆ. ಮಾಧ್ಯಮ ವರದಿಗಳ ಪ್ರಕಾರ ಅನೇಕ ವಾಹನಗಳು ಪಟಾಪ್ಸ್ಕೋ ನದಿಯ ಪಾಲಾಗಿವೆ. ಅಲ್ಲದೆ, ಘಟನಾ ಸಮಯದಲ್ಲಿ 20 ನಿರ್ಮಾಣ ಕಾರ್ಮಿಕರು ಸೇತುವೆ ಮೇಲಿದ್ದರು ಎಂದು ವರದಿಯಾಗಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
ಈ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ 3 ಕಿ.ಮೀ ಉದ್ದದ ಬೃಹತ್ ಸೇತುವೆ ಕುಸಿದು ಬೀಳುವ ಭಯಾನಕ ದೃಶ್ಯ ಸೆರೆಯಾಗಿದೆ. ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಒಂದು ಪಿಲ್ಲರ್ಗೆ ಹಡಗು ಡಿಕ್ಕಿ ಹೊಡೆಯುತ್ತದೆ. ಇದರ ಪರಿಣಾಮ ಸೇತುವೆಯ ಅನೇಕ ಭಾಗಗಳಲ್ಲಿ ಬಿರುಕು ಬಿಟ್ಟು ಒಮ್ಮೆಲೆ ಕುಸಿದು ನದಿಗೆ ಬೀಳುತ್ತದೆ.
ಸೇತುವೆಗೆ ಡಿಕ್ಕಿ ಹೊಡೆದ ಬೆನ್ನಲ್ಲೇ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ, ನೀರಿನಲ್ಲಿ ಮುಳುತ್ತಿರುವಂತೆ ವಿಡಿಯೋದಲ್ಲಿ ಕಾಣಿಸುತ್ತದೆ.
ಸಿಂಗಪೂರ್ ಮೂಲದ ಕಂಟೈನರ್ ಹಡಗು ಡಾಲಿ, ಬಾಲ್ಟಿಮೋರ್ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್ನ ಪಿಲ್ಲರ್ ಒಂದಕ್ಕೆ ಡಿಕ್ಕಿ ಹೊಡೆದಿದೆ ಎಂದು ಹಡಗಿನ ನೋಂದಾಯಿತ ಮಾಲೀಕರಾದ ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಸಿನರ್ಜಿ ಮೆರೈನ್ ಗ್ರೂಪ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಘಟನೆಗೆ ನಿಖರವಾದ ಕಾರಣ ತಿಳಿದುಬರಬೇಕಿದೆ. ಹಡಗಿನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಮತ್ತು ಹಡಗಿನಲ್ಲಿದ್ದ ಯಾರೊಬ್ಬರಿಗೂ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಎರಡೂ ದಿಕ್ಕುಗಳಲ್ಲಿನ ಎಲ್ಲಾ ಮಾರ್ಗಗಳನ್ನು ಸಂಚಾರಕ್ಕಾಗಿ ಮುಚ್ಚಲಾಗಿದೆ ಎಂದು ಸ್ಥಳೀಯ ಟ್ರಾಫಿಕ್ ತಿಳಿಸಿದೆ. (ಏಜೆನ್ಸೀಸ್)