ನವದೆಹಲಿ: ಕಳೆದ ಎಂಬತ್ತು ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ಮೂರು ತಿಂಗಳಲ್ಲಿ ಸಾಧಿಸಿ ಬೀಗಿದೆ ಈ ಕಂಪನಿ. ಎಲ್ಲರಿಗೂ ಲಾಕ್ಡೌನ್ ಅವಧಿ ಸಂಕಷ್ಟದ ಕಾಲವಾಗಿದ್ದರೆ, ಈ ಕಂಪನಿ ಮಾತ್ರ ಭಾರಿ ಲಾಭ ಗಳಿಸಿದೆ.
ಲಾಕ್ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂತೆಯೇ ಆಹಾಋ ಉತ್ಪಾದನೆ ಕಾರ್ಖಾನೆಗಳ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ. ಹೀಗಾಗಿ ಬಿಸ್ಕೆಟ್ ಉತ್ಪಾದನೆ ಕಾರ್ಖಾನೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು. ಈ ಅವಧಿಯಲ್ಲಿ ಭಾರಿ ಬೇಡಿಕೆ ಗಳಿಸಿದ್ದು, ಪಾರ್ಲೆ ಕಂಪನಿ.
ಈ ಕಂಪನಿಯ ಪಾರ್ಲೆ-ಜಿ ಬಿಸ್ಕೆಟ್ ಹೊಸ ದಾಖಲೆಯನ್ನೇ ಬರೆದಿದೆ. ಕಂಪನಿ 80 ವರ್ಷಗಳಲ್ಲಿಯೇ ಅತಿ ಹೆಚ್ಚು ಮಾರಾಟವನ್ನು ಲಾಕ್ಡೌನ್ ಅವಧಿಯ ಮೂರು ತಿಂಗಳಲ್ಲಿ ಮಾಡಿದೆ. ಒಟ್ಟಾರೆ ಬಿಸ್ಕೆಟ್ ಮಾರಾಟದಲ್ಲಿ ಶೇ.80-90 ಪಾರ್ಲೆ-ಜಿ ಪಾಲು ಹೊಂದಿದೆ.
ಕೆಜಿಗೆ 100 ರೂ. ಆಸುಪಾಸಿನ ಬೆಲೆ ಹೊಮದಿರುವ ಪಾರ್ಲೆ-ಜಿ ಜನಸಾಮಾನ್ಯರ ಬಿಸ್ಕೆಟ್ ಎಂದೇ ಹೆಸರಾಗಿದೆ. ಲಾಕ್ಡೌನ್ ಅವಧಿಯಲ್ಲಿ ಊಟಕ್ಕೆ ಪರದಾಡಿದವರು ಈ ಬಿಸ್ಕೆಟ್ ತಂದೇ ಕಾಲ ಕಳೆದಿದ್ದಾರೆ. ಹಲವು ರಾಜ್ಯ ಸರ್ಕಾರಗಳು ಕೂಡ ಬೇಡಿಕೆ ಸಲ್ಲಿಸಿದ್ದವು. ಕೆಲ ಸರ್ಕಾರೇತರ ಸಂಸ್ಥೆಗಳು ಕೂಡ ದೊಡ್ಡ ಪ್ರಮಾಣದಲ್ಲಿ ಈ ಬಿಸ್ಕೆಟ್ ಖರೀದಿಸಿವೆ ಎಂದು ಪಾರ್ಲೆ ಉತ್ಪನ್ನಗಳ ವರ್ಗೀಕರಣ ಮುಖ್ಯಸ್ಥ ಮಯಾಂಕ್ ಷಾ ಮಾಹಿತಿ ನೀಡಿದ್ದಾರೆ.
ದೇಶದ 130 ಕಡೆಗಳಲ್ಲಿ ಪಾರ್ಲೆ ಉತ್ಪಾದನಾ ಘಟಕಗಳನ್ನು ಹೊಂದಿದೆ. ಅದರಲ್ಲಿ ಸ್ಥಳಗಳಲ್ಲಿ ಸ್ವಂತ ಕಾರ್ಖಾನೆಗಳಿವೆ. ಲಾಕ್ಡೌನ್ ಅವಧಿಯಲ್ಲಿ ಬಿಸ್ಕೆಟ್ ಪೂರೈಕೆಗಾಗಿ ವಿತರಣಾ ಜಾಲವನ್ನು ಕೇವಲ ಏಳು ದಿನಗಳಲ್ಲಿ ಸಂಪೂರ್ಣವಾಗಿ ಪರಿಷ್ಕರಿಸಿತ್ತು.