ನ್ಯೂಸ್

ಸದ್ದಿಲ್ಲದಂತೆ ಯಶಸ್ವಿ 25 ದಿನಗಳನ್ನು ಪೂರೈಸಿದ 'ಪರಿಶುದ್ಧಂ'

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಪ್ರತಿವಾರ ವಿಶೇಷ ಹಾಗೂ ವಿಭಿನ್ನ ಕಥಾಹಂದರವುಳ್ಳ ಅನೇಕ ಸಿನಿಮಾಗಳು ಸಿನಿಪ್ರೇಕ್ಷಕರ ಎದುರು ಹಾಜರಾಗಲಿದ್ದು, ನಿರಂತರವಾಗಿ ಮನರಂಜಿಸುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಈ ಮಧ್ಯೆ ಸೆ. 22 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ 'ಪರಿಶುದ್ಧಂ' ಚಿತ್ರವು ಇದೀಗ ಸದ್ದಿಲ್ಲದಂತೆ ಯಶಸ್ವಿ 25 ದಿನಗಳನ್ನು ಪೂರೈಸಿದೆ.

ಹೆಚ್ಚು ಪ್ರಚಾರ ಕಾರ್ಯಗಳಿಂದ ಪ್ರೇಕ್ಷಕರ ಗಮನ ಸೆಳೆಯಲು ವಿಫಲಗೊಂಡ ’ಪರಿಶುದ್ಧಂ’ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಸದ್ಯ ಮುಂಚೂಣಿಯಲ್ಲಿದೆ. ಈ ಸಂಗತಿ ಇದೀಗ ಚಿತ್ರತಂಡಕ್ಕೆ ಭಾರೀ ಸಂತಸ ತಂದಿದೆ.

ಯಶಸ್ವಿ 25 ದಿನಗಳನ್ನು ಪೂರೈಸಿದ ಬೆನ್ನಲ್ಲೇ ಚಿತ್ರತಂಡವು ಚಿತ್ರಮಂದಿರದಲ್ಲಿ ಪ್ರೇಕ್ಷಕರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮವನ್ನು ಆಚರಿಸಿಕೊಂಡಿದೆ. ಮುಖ್ಯಭೂಮಿಕೆಯಲ್ಲಿ ನಟಿ ಕಲ್ಪನಾರಂತೆ ಕಾಣಿಸಿಕೊಂಡ ಸ್ಪರ್ಶಾ ರೇಖಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಈ ಸಿನಿಮಾದ ಎರಡನೇ ಭಾಗ ಶೀಘ್ರವೇ ಬರಲಿದೆ ಎಂಬ ಮುನ್ಸೂಚನೆ ಚಿತ್ರದ ಕೊನೆಯಲ್ಲಿ ಲಭಿಸಿದೆ.

ಚಿತ್ರದಲ್ಲಿ ದಿಶಾಪೂವಯ್ಯ ಉಳಿದಂತೆ ಯತಿರಾಜ್,ಭಾರ್ಗವ್, ಅರ್ಚನಾ, ವಿಕ್ಟರಿವಾಸು, ಕುರಿರಂಗ, ಮೈಸೂರು ರಮಾನಂದ್, ರಾಜ್‌ಚರಣ್, ದುಬೈ ರಫೀಕ್ ಮುಂತಾದವರ ತಾರಾಗಣವಿದೆ.