ನ್ಯೂಸ್

ವಿರೋಧದ ನಡವೆಯೂ ಪ್ರಿಯಕರನನ್ನು ಮದುವೆಯಾದ ಮಗಳು: ಅಂತಿಮ ಸಂಸ್ಕಾರ ಮಾಡಿದ ಪಾಲಕರು

ಭುವನೇಶ್ವರ್​: ವಿರೋಧದ ನಡುವೆಯೂ ಪ್ರಿಯಕರನನ್ನು ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡ ಪಾಲಕರು ತಮ್ಮ ಮಗಳಿಗೆ ಅಂತಿಮ ಸಂಸ್ಕಾರ ಮಾಡಿರುವ ಘಟನೆ ಒಡಿಶಾದ ಕೇಂದ್ರಪರ ಜಿಲ್ಲೆಯ ಔಲ್​ನ ನುವಾಬಜಾರ್​ನಲ್ಲಿ ನಡೆದಿದೆ.

ಮೂಲಗಳ ಪ್ರಕಾರ, ಔಲ್‌ನ ನುವಾಬಜಾರ್ ಪ್ರದೇಶದ ನಿವಾಸಿ ಶ್ರೀವಾಸ್ತವ್ ಮಲ್ಲಿಕ್ ಮತ್ತು ಅದೇ ಏರಿಯಾದ ಹುಡುಗಿ ಪ್ರೀತಿಸುತ್ತಿದ್ದರು. ಮಲ್ಲಿಕ್ ಜತೆಗಿನ ಸಂಬಂಧಕ್ಕೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅವರ ಆಕ್ಷೇಪದ ಹೊರತಾಗಿಯೂ, ನವಜೋಡಿ ಕಳೆದ ಸೋಮವಾರ ಔಲ್‌ನ ಲಕ್ಷ್ಮೀಬಾರಹ್​ ದೇವಸ್ಥಾನದಲ್ಲಿ ವಿವಾಹವಾದರು. ವರನ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿತು.

ಈ ಮದುವೆಯಿಂದ ಆಕ್ರೋಶಗೊಂಡ ಪಾಲಕರು ತುಂಬಾ ಕೋಪಗೊಂಡು, ತಮ್ಮ ಮಗಳ ಅಂತ್ಯಕ್ರಿಯೆಯನ್ನು ಮಾಡಿ, ಆಕ್ರೊಶ ಹೊರಹಾಕಿದ್ದಾರೆ. ತಮ್ಮ ಮಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಂಬಂಧಿಕರು ಸಹ ಪಿಂಡದಾನ ಸೇರಿದಂತೆ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡರು.

ನನ್ನ ಪಾಲಕರು, ಚಿಕ್ಕಪ್ಪ ಮತ್ತು ಕುಟುಂಬದ ಇತರ ಸದಸ್ಯರು ನನ್ನ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ್ದಾರೆ. ನನ್ನ ತಂದೆ-ತಾಯಿ ಮೊದಲು ನನ್ನ ಪರವಾಗಿದ್ದರು ಆದರೆ, ನನ್ನ ಚಿಕ್ಕಪ್ಪಂದಿರು ಅವರ ಮನವೊಲಿಸಿದ್ದಾರೆ ಎಂದು ನವವಿವಾಹಿತೆ ಆರೋಪ ಮಾಡಿದ್ದಾರೆ.

ಮತ್ತೊಂದೆಡೆ ಹುಡುಗಿಯ ಚಿಕ್ಕಪ್ಪ ಬಾಬುರಾಮ್ ಮಲ್ಲಿಕ್ ಮಾತನಾಡಿ, ಇದು ಭಾದ್ರಾಬ್ ಮಾಸವಾಗಿರುವುದರಿಂದ ಮದುವೆಯಂತಹ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಆದರೂ ನಮ್ಮ ಮನೆ ಮುಂದೆ ಮದುವೆ ಮೆರವಣಿಗೆ ನಡೆಸಿದರು. ಹೀಗಾಗಿ ಗ್ರಾಮಸ್ಥರ ಜತೆ ಚರ್ಚಿಸಿ, ನಾವು ಹೀಗೆ ಮಾಡಿದೆವು ಎಂದು ಸಮರ್ಥಿಸಿಕೊಂಡಿದ್ದಾರೆ.

ವರ ಶ್ರೀವಾಸ್ತವ್ ಮಲ್ಲಿಕ್ ಅವರ ತಂದೆ ಆನಮ್ ಮಲ್ಲಿಕ್ ಮಾತನಾಡಿ, ನನ್ನ ಮಗ ಮತ್ತು ಯುವತಿಯು ನಮ್ಮ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಲಕ್ಷ್ಮೀಬಾರಹ್​ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡರು. ಮರುದಿನ ಬೆಳಗ್ಗೆ ಮೊಸಳೆ ದಾಳಿಯಿಂದ ತಮ್ಮ ಮಗಳನ್ನು ಕಳೆದುಕೊಂಡೆವು ಎಂದು ಹೇಳಿ ನನ್ನ ಸೊಸೆಯ ಅಂತ್ಯಕ್ರಿಯೆಯನ್ನು ಮಾಡಿದರು ಎಂದಿದ್ದಾರೆ. (ಏಜೆನ್ಸೀಸ್​)