ನ್ಯೂಸ್

ಪಾಲಕರ ಒಲವು, ಸರ್ಕಾರಿ ಶಾಲೆಗಳು ಫುಲ್!; ಈ ವರ್ಷ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ 45.56 ಲಕ್ಷಕ್ಕೆ ಏರಿಕೆ

| ದೇವರಾಜ್ ಕನಕಪುರ ಬೆಂಗಳೂರು

ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವುದು ಪ್ರತಿಷ್ಠೆ ಎಂಬ ಮನಸ್ಥಿತಿ ಬದಲಾಗುತ್ತಿದ್ದು, ಸರ್ಕಾರಿ ಶಾಲೆಗಳತ್ತ ಪಾಲಕರ ಒಲವು ಹೆಚ್ಚುತ್ತಿದೆ. ಕರೊನಾ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಸರ್ಕಾರಿ ಶಾಲೆಗಳ ಉಳಿವಿನ ವಿಚಾರವಾಗಿಯೂ ಇದು ಹೊಸ ಆಶಾಭಾವನೆ ಮೂಡಿಸಿದೆ. ಈ ವರ್ಷ ಸರ್ಕಾರಿ ಶಾಲೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 1.65 ಲಕ್ಷ ಹೆಚ್ಚಳವಾಗಿದ್ದು, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಕಳೆದ ವರ್ಷಕ್ಕಿಂತ 4.57 ಲಕ್ಷ ಕಡಿಮೆಯಾಗಿದೆ.

2021- 22ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಜೂ.15ರಿಂದ ಆರಂಭವಾಗಿದ್ದು, ಆ.30 ಕೊನೆಯ ದಿನವಾಗಿತ್ತು. ರಾಜ್ಯದಲ್ಲಿ 48,006 ಸರ್ಕಾರಿ ಶಾಲೆಗಳಿದ್ದು, ಈ ವರ್ಷ 45,56,131 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 22,065 ಖಾಸಗಿ ಶಾಲೆಗಳಿದ್ದು, 40,38,707 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2020-21ರಲ್ಲಿ ಸರ್ಕಾರಿ ಶಾಲೆಯಲ್ಲಿ 43,90,273 ಮತ್ತು ಖಾಸಗಿ ಶಾಲೆಗೆ 44,95,988 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ವರ್ಷದ ಅಂಕಿ-ಅಂಶಗಳನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಸರ್ಕಾರಿ ಶಾಲೆಗೆ 1,65,858 ವಿದ್ಯಾರ್ಥಿಗಳ ಪ್ರವೇಶ ಹೆಚ್ಚಳವಾಗಿದ್ದು, ಖಾಸಗಿ ಶಾಲೆಗೆ 4,57,281 ಪ್ರವೇಶ ಕಡಿಮೆಯಾಗಿರುವುದು ಸರ್ಕಾರದ ಅಂಕಿ-ಅಂಶಗಳಿಂದ ದೃಢಪಟ್ಟಿದೆ.

ವರ್ಗಾವಣೆಪತ್ರ ಕಿರಿಕಿರಿ: ಖಾಸಗಿ ಶಾಲೆಯಿಂದ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪಾಲಕರು ವರ್ಗಾವಣೆ ಪತ್ರ ತೆಗೆದು ಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ಖಾಸಗಿ ಶಾಲೆಗಳು ವರ್ಗಾ ವಣೆ ಪತ್ರ ನೀಡುವುದಕ್ಕೆ ಹಿಂದೇಟು ಹಾಕುತ್ತಿವೆ. ಬಾಕಿ ಶುಲ್ಕ ಪಾವತಿಸದ ಹೊರತು ವರ್ಗಾವಣೆ ಪತ್ರ ನೀಡುವುದಿಲ್ಲವೆಂದು ಖಾಸಗಿ ಶಾಲೆ ಆಡಳಿತ ಮಂಡಳಿಗಳು ಪಾಲಕರಿಗೆ ಸ್ಪಷ್ಟವಾಗಿ ತಿಳಿಸಿವೆ. ಹೀಗಾಗಿ ಪಾಲಕರು ತೊಂದರೆಗೆ ಸಿಲುಕಿದ್ದಾರೆ.

ಪಾಲಕರು ಹಿಂದೇಟು ಹಾಕಲು ಕಾರಣ

  • ಕರೊನಾ 1ನೇ ಅಲೆ ಮತ್ತು 2ನೇ ಅಲೆಯಿಂದ ಬಹುತೇಕ ಪಾಲಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ
  • ಲಕ್ಷಾಂತರ ರೂ. ಶುಲ್ಕ ಪಾವತಿಸಿ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಓದಿಸುವುದು ಕಷ್ಟದ ಮಾತಾಗಿದೆ
  • ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಕರಣ ಕಡಿಮೆಯಾಗಿದ್ದರೂ 3ನೇ ಅಲೆ ಭಯದಿಂದ ಶಾಲೆಗೆ ಸೇರಿಸುತ್ತಿಲ್ಲ.
  • ಈ ವರ್ಷ ಕೂಡ ಪ್ರಾಥಮಿಕ ಶಾಲೆಗಳಿಗೆ ಭೌತಿಕ ತರಗತಿಗಳು ನಡೆಯುವ ಲಕ್ಷಣ ಕಡಿಮೆ
  • ಖಾಸಗಿ ಶಾಲೆಗೆ ದುಬಾರಿ ಶುಲ್ಕ ಏಕೆ ಪಾವತಿಸಬೇಕು? ಎಂಬ ಮನೋಭಾವ ಪಾಲಕರಲ್ಲಿದೆ
ಶುಲ್ಕ ಕಡಿತ ನಿರೀಕ್ಷೆ: ಕಳೆದ ವರ್ಷ ಕರೊನಾ ಕಾರಣಕ್ಕೆ ರಾಜ್ಯ ಸರ್ಕಾರ ಶುಲ್ಕ ಕಡಿತ ಮಾಡಿತ್ತು. ಶೇ.70 ಬೋಧನಾ ಶುಲ್ಕವನ್ನು ಮಾತ್ರ ಪಾವತಿಸುವಂತೆ ಆದೇಶ ಹೊರಡಿಸಿತ್ತು. ಈ ಬಾರಿ ಕೂಡ ಶೈಕ್ಷಣಿಕ ಅವಧಿ ಕಡಿತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಶುಲ್ಕ ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಪಾಲಕರಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ತಮ್ಮ ಮಕ್ಕಳನ್ನು ದಾಖಲು ಮಾಡುತ್ತಿಲ್ಲವೆಂಬ ಅಂಶ ತಿಳಿದು ಬಂದಿದೆ.

ಜಿಲ್ಲೆಗಳ ಪರಿಸ್ಥಿತಿ: ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿ ಒಟ್ಟಾರೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಜಿಲ್ಲಾವಾರು ಸಂಖ್ಯೆ ಗಮನಿಸಿದಾಗ ಮೊದಲ ಸ್ಥಾನದಲ್ಲಿ ಬೆಂಗಳೂರು ದಕ್ಷಿಣ ಇದೆ. ಇಲ್ಲಿ 8,99,200 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅತಿ ಕಡಿಮೆ ಪ್ರವೇಶ ಪಡೆದ ಜಿಲ್ಲೆಯಲ್ಲಿ ಕೊಡಗು ಮೊದಲ ಸ್ಥಾನದಲ್ಲಿದೆ. ಇಲ್ಲಿ 71,968 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನು ಸರ್ಕಾರಿ ಶಾಲೆಯ ಅಂಕಿ-ಅಂಶ ಗಮನಿಸಿದರೆ, ಬಳ್ಳಾರಿ ಮುಂದಿದೆ. ಇಲ್ಲಿ 3,00,914 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಡಿಮೆ ಸಾಲಿನಲ್ಲಿ ಕೊಡಗು ಜಿಲ್ಲೆ ಇದೆ. ಇಲ್ಲಿ 23,618 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ.

ಪ್ರವೇಶ ವಿಸ್ತರಿಸಿದ ಖಾಸಗಿ ಶಾಲೆಗಳು: ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಕುಂಠಿತವಾಗಿರುವುದರಿಂದ ಹಾಗೂ ಬಹುತೇಕ ವಿದ್ಯಾರ್ಥಿಗಳು ಪ್ರವೇಶ ಪಡೆಯದೆ ಇರುವುದರಿಂದ ಪ್ರವೇಶಕ್ಕಾಗಿ ನಿಗದಿ ಪಡಿಸಿದ್ದ ದಿನಾಂಕವನ್ನು ಎರಡು ತಿಂಗಳ ಕಾಲ ಅಂದರೆ, ಅಕ್ಟೋಬರ್ 30ರವರೆಗೆ ವಿಸ್ತರಿಸಲಾಗಿದೆ.

ಕರೊನಾ ಸಮಯದಲ್ಲಿ ಶುಲ್ಕಕ್ಕಾಗಿ ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಪಾಲಕರ ನಡುವೆ ನಡೆಯುತ್ತಿರುವ ಜಟಾಪಟಿಯಿಂದ ಪಾಲಕರು ಬೇಸತ್ತಿದ್ದು, ಆನ್​ಲೈನ್​ಗಿಂತ ವಿದ್ಯಾಗಮವೇ ಉತ್ತಮ ಎಂದು ಅನಿಸಿರುವುದು ಪ್ರವೇಶ ಹೆಚ್ಚಳಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಮ್ಮಿ ಇಲ್ಲ ಎಂಬುದನ್ನು ನಾವು ತೋರಿಸುತ್ತೇವೆ.

| ಬಿ.ಸಿ.ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಆರ್ಥಿಕ ಹೊಡೆತ, ಉದ್ಯೋಗ ನಷ್ಟದ ಕಾರಣ ಪಾಲಕರು ನಗರ ಬಿಟ್ಟು ಹಳ್ಳಿಗಳಿಗೆ ವಲಸೆ ಹೋಗಿರುವುದರಿಂದ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಇನ್ನು ಮುಂದೆಯಾದರೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೊಳಿಸುವ ಕಡೆ ಸರ್ಕಾರ ಗಮನ ನೀಡಬೇಕು.

| ನಿರಂಜನಾರಾಧ್ಯ ಶಿಕ್ಷಣ ತಜ್ಞ

ನಕಲಿ ಅಂಕಿ-ಅಂಶ ಎಂಬ ಆರೋಪ: ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡುವುದಕ್ಕಾಗಿ ಡೇಟಾ ರೂಪಿಸಿದೆ. ದಾಖಲೆಯಲ್ಲಿ ಮಾತ್ರ ಮಕ್ಕಳ ಸಂಖ್ಯೆ ಇದೆ. ವಾಸ್ತವಾಂಶದಲ್ಲಿ ಹೆಚ್ಚಿನ ಮಕ್ಕಳಿಲ್ಲ. ಇದೊಂದು ಬೋಗಸ್ ಡೇಟಾ ಎಂದು ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್್ಸ) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಆರೋಪಿಸಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಹೈಕೋರ್ಟ್ ಶಿಕ್ಷಣ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ರೀತಿ ಅಂಕಿ-ಅಂಶಗಳನ್ನು ರೂಪಿಸಿದೆ. ಶಿಕ್ಷಕರು ಮನೆಗಳಿಗೆ ಹೋಗಿ ಮಕ್ಕಳ ಆಧಾರ್ ಕಾರ್ಡ್ ಪಡೆದು ದಾಖಲಾತಿ ಮಾಡಿದ್ದಾರೆ. ಇದರಿಂದಾಗಿ ಈ ಡೇಟಾ ಮೇಲೆ ನಮಗೆ ನಂಬಿಕೆ ಇಲ್ಲ ಎಂದಿದ್ದಾರೆ.