ತಂದೆ-ತಾಯಿಯ ಸೇವೆ ಮಾಡದೇ ಅವರಿಂದಲೇ ಸೇವೆ ಮಾಡಿಸಿಕೊಳ್ಳಬೇಕಾದ ಸ್ಥಿತಿ ಇದ್ದರೆ ಕನಿಷ್ಠ ಒಳ್ಳೆಯ ಮಾತಾದರೂ ಆಡಬೇಕು. ಕುಳಿತು ಬಯ್ಯಬಾರದು. ಆದರೆ ಯಾವನಿಗೆ ಸಾಮರ್ಥ್ಯ ಇದೆಯೋ ಅಂದರೆ ದೇಹ ಚೆನ್ನಾಗಿ ಗಟ್ಟಿಮುಟ್ಟಾಗಿ ಇದೆಯೋ, ಸಂಪತ್ತು ಚೆನ್ನಾಗಿದೆಯೋ ಅಂಥವನು ತಾನು ಗಳಿಸಿದ್ದನ್ನೆಲ್ಲ ತಂದೆ ತಾಯಿಗಳ ಸೇವೆಗೆ ಉಪಯೋಗಿಸಬೇಕು ಎಂಬುದಾಗಿ ಹೇಳುತ್ತಾರೆ.
ಯಾರು ತಂದೆತಾಯಿಗಳನ್ನು ಅವಮಾನ ಮಾಡುತ್ತಾರೋ ಅವರು ಸತ್ತ ಮೇಲೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುತ್ತಾರೆ. ಆ ತರಹದ ಘೊರವಾದ ಶಿಕ್ಷೆಯನ್ನು ಕೊಡುತ್ತಾರೆ. ಶ್ವೇತ ರಾಜನ ಕಥೆಯಲ್ಲಿ ತಿಳಿಯುವಂತೆ ಅನ್ನದಾನ ಮಾಡದೇ ಯಜ್ಞ ಮಾಡಿದ್ದಕ್ಕೆ ತನ್ನ ಮಾಂಸವನ್ನೇ ತಾನು ತಿನ್ನುವ ಪ್ರಸಂಗ ಬಂದೊದಗಿತು. ಹಾಗೇ ಇವನಿಗೆ ತಂದೆ ತಾಯಿಗಳ ಸೇವೆಯನ್ನು ಮಾಡದೇ ಇದ್ದರೆ ತನ್ನ ಮಾಂಸವನ್ನು ತಾನು ತಿನ್ನುವ ಪ್ರಸಂಗ ಬರುತ್ತದೆ. ದೇಹ ಕೊಟ್ಟವರ ಉಪಕಾರ ಸ್ಮರಣೆ ಮಾಡದೇ ಇದ್ದದಕ್ಕೆ ದೇಹವನ್ನೇ ತಿಂದು ಬದುಕುವ ಘೊರವಾದಂತಹ ಶಿಕ್ಷೆಯನ್ನು ನೀನು ಅನುಭವಿಸಬೇಕಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಸಾಧ್ವಿಯಾಗಿ ಇರುವ ಹೆಂಡತಿ, ಅತ್ಯಂತ ಸಣ್ಣ ಮಗು ಅಥವಾ ವೃದ್ಧರಾದ ತಂದೆ ತಾಯಿಗಳು, ಗುರುಗಳು, ಜ್ಞಾನಿಗಳು, ತನಗೆ ಶರಣು ಬಂದವರು ಇಂಥವರನ್ನು ಯಾರು ರಕ್ಷಣೆ ಮಾಡುವುದಿಲ್ಲವೋ ಅವನು ಶವ, ಹೆಣ ಇದ್ದ ಹಾಗೆ. ಅಂದರೆ, ಹೆಣಗಳು ಶ್ವಾಸ್ವೊಚ್ಛಾಸ ಮಾಡುವುದಿಲ್ಲ, ಇದು ಶ್ವಾಸ್ವೊಚ್ಛಾಸ ಮಾಡುತ್ತ ಅಲ್ಲಿ ಇಲ್ಲಿ ಓಡಾಡುವ ಹೆಣ. ಇವುಗಳ ನಡುವೆ ಬೇರೆ ಯಾವ ವ್ಯತ್ಯಾಸ ಇಲ್ಲ. ಹೆಣಕ್ಕಿಂತಲೂ ವೈಶಿಷ್ಟ್ಯ ಇವನೊಳಗೆ ಏನೂ ಇಲ್ಲ. ಅಷ್ಟು ನೀಚನಾಗಿದ್ದಾನೆ ಎಂದು ಕೃಷ್ಣ ಪರಮಾತ್ಮ ಬಯ್ಯುತ್ತಿದ್ದಾನೆ. ಇದು ತನಗೆ ತಾನು ಬೈಯ್ದುಕೊಳ್ಳುತ್ತಿರುವುದಲ್ಲ, ವಸುದೇವ ದೇವಕಿಯರಿಗೆ ಅಥವಾ ಅಲ್ಲಿ ಕೇಳುವ ಉಳಿದ ಜನರಿಗೆ ನೀವು ಇದನ್ನು ತಿಳಿಯಿರಿ ಎಂದು ಇದನ್ನೆಲ್ಲ ಹೇಳುತ್ತಿದ್ದಾನೆ.