ಮುಂಬೈ: ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2' (Pushpa 2) ಸಿನಿಮಾ ನಿನ್ನೆ (ಡಿ.05) ಜಾಗತಿಕ ಮಟ್ಟದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ರಿಲೀಸ್ ಆದ ಕ್ಷಣದಿಂದಲೂ ದೇಶಾದ್ಯಂತ ಪುಷ್ಪ ಚಿತ್ರದ್ದೇ ಹವಾ ಹೆಚ್ಚಾಗಿದ್ದು, ಚಿತ್ರಮಂದಿರಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪುಷ್ಪ ಡೈಲಾಗ್ಗಳು ಬರುತ್ತಿದ್ದಂತೆ ಥಿಯೇಟರ್ನ ಸ್ಕ್ರೀನ್ ಮುಂದೆ ಹೋಗಿ ಬೆಂಕಿ ಹಚ್ಚುವುದು, ಸ್ಪ್ರೇ ಹೊಡೆಯುವುದು ಹೀಗೆ ವಿಚಿತ್ರವಾಗಿ ಸಂಭ್ರಮಿಸಿರುವ ಅಭಿಮಾನಿಗಳ ಹುಚ್ಚಾಟ ಮಿತಿಮೀರಿದೆ. ಕೆಲವೆಡೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದೇ ಆದರೂ ಹುಚ್ಚು ಅಭಿಮಾನಿಗಳ ಹುಚ್ಚಾಟಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ. ಇದಕ್ಕೆ ಈ ಘಟನೆಯೂ ಕೂಡ ಜ್ವಲಂತ ಸಾಕ್ಷಿ.
ರಿಲೀಸ್ಗೂ ಮುನ್ನವೇ ಭಾರೀ ಸದ್ದು ಮಾಡಿದ ಪುಷ್ಪ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಬೇಕು ಎಂದು ಮುಂಚಿತವಾಗಿಯೇ ಟಿಕೆಟ್ ಖರೀದಿಸಿದ್ದ ಪ್ರೇಕ್ಷಕರು, ವಾಂತಿ, ಕೆಮ್ಮಿನಿಂದ ಚಿತ್ರ ನೋಡುವ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಅಸಲಿಗೆ ಈ ಘಟನೆ ನಡೆದಿರುವುದು ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಥಿಯೇಟರ್ನಲ್ಲಿ. 'ಪುಷ್ಪ 2' ಸಿನಿಮಾದ ಪ್ರದರ್ಶನದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಚಿತ್ರದ ಮಾಸ್ ಡೈಲಾಗ್ ಕೇಳಿಬಂದ ತಕ್ಷಣವೇ ಸ್ಕ್ರೀನ್ ಮುಂದೆ ನಿಂತು ಯಾವುದೋ ವಿಪರೀತ ಹೊಗೆ ಬರುವಂತ ಸ್ಪ್ರೇ ಎರಚಿದ್ದಾನೆ. ಇದರಿಂದ ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಕಿರಿಕಿರಿ ಉಂಟಾಗಿದ್ದು, ಹಲವರು ಹೊಗೆಯ ತೀವ್ರತೆಗೆ ಕೆಮ್ಮು, ವಾಂತಿ ಮಾಡಿಕೊಂಡಿದ್ದಾರೆ. ಘಟನೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಸಲಿಗೆ ಆ ಸ್ಪ್ರೇ ಹೊಡೆದವರು ಯಾರು ಎಂಬುದು ಹೊಗೆಯಲ್ಲಿ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸ್ಪ್ರೇ ಪರಿಣಾಮ ಉಸಿರಾಡಲು ಕಷ್ಟವಾದ ಹಿನ್ನಲೆ ಹಲವರು ಥಿಯೇಟರ್ನಿಂದ ಹೊರಗೆ ಎದ್ದು ಹೋದರೆ, ಇನ್ನೂ ಕೆಲವರು ಮುಖಕ್ಕೆ ಕರವಸ್ತ್ರ ಮತ್ತು ಬಟ್ಟೆಯನ್ನು ಮುಚ್ಚಿಕೊಂಡಿದ್ದಾರೆ. ಸಿನಿಮಾ ಪ್ರದರ್ಶನದ ಮಧ್ಯೆ ಈ ರೀತಿಯಾಗಿದ್ದು, ಅನೇಕರ ಅಸಮಾಧಾನಕ್ಕೆ ಕಾರಣವಾಯಿತು. ಈ ಘಟನೆ ಮೇರೆಗೆ ಚಿತ್ರದ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಮೊದಲಾರ್ಧ ನೋಡಿದ್ದ ಸಿನಿರಸಿಕರು ಇನ್ನೇನು ಎರಡನೇ ಭಾಗ ನೋಡುವ ವೇಳೆಗೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).