ನವದೆಹಲಿ: ಭಾರತೀಯ ನಾಗರೀಕನೆಂಬಂತೆ ನಕಲಿ ದಾಖಲಾತಿಯೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ನಗರದ ಲಕ್ಷ್ಮೀನಗರದ ರಮೇಶ್ ಪಾರ್ಕ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮೊಹಮ್ಮದ್ ಅಸ್ರಫ್ ಬಂಧಿತ.
ಬಂಧಿತ ಭಯೋತ್ಪಾದಕನ ಬಳಿಯಿಂದ ಒಂದು ಎಕೆ-47 ಅಸಾಲ್ಟ್ ರೈಫಲ್, ಎಕ್ಸ್ಟ್ರಾ ಮ್ಯಾಗಜಿನ್, 60 ರೌಂಡ್ಸ್ ಬುಲೆಟ್ಗಳು, ಒಂದು ಹ್ಯಾಂಡ್ ಗ್ರೆನೇಡ್, 2 ಅತ್ಯಾಧುನಿಕ ಪಿಸ್ತೋಲ್ಗಳು ಮತ್ತು ಅದರ 50 ರೌಂಡ್ಸ್ ಬುಲೆಟ್ಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಮೊಹಮ್ಮದ್ ಅಸ್ರಫ್ನ ಮನೆ ಮಾಲೀಕನಾದ ಉಜೈಬ್, ಸುದ್ದಿ ಸಂಸ್ಥೆ ಎಎನ್ಐನೊಂದಿಗೆ ಮಾತನಾಡಿದ್ದು, ಅಸ್ರಫ್ ಅಲ್ಲಿ 6 ತಿಂಗಳು ವಾಸಿಸಿದ್ದ. ತಮ್ಮ ತಂದೆಯೇ ಬಾಡಿಗೆ ಒಪ್ಪಂದ ಮಾಡಿಸುವುದಕ್ಕಾಗಿ ಅವರ ಆಧಾರ್ ಕಾರ್ಡ್ ಮಾಡಿಸಿದ್ದರು. ಅವನು ಇಲ್ಲಿಂದ ತೆರಳಿದ ಮೇಲೆ ಸಂಪರ್ಕದಲ್ಲಿರಲಿಲ್ಲ. ಅಗತ್ಯವಿದ್ದರೆ, ಪೊಲೀಸರೊಂದಿಗೆ ನಾವು ಸಹಕರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)