ನ್ಯೂಸ್

ಬಿಕಿನಿ ತೊಟ್ಟು ರ‍್ಯಾಂಪ್ ವಾಕ್​​ ಮಾಡಿದ್ದೇ ತಡ ಪಾಕ್​ ಮಾಡೆಲ್​ಗೆ ಎದುರಾಯ್ತು ಸಂಕಷ್ಟ! ಕೊನೆಗೆ ವಿಡಿಯೋ ಡಿಲೀಟ್​ | Roma Michael

Roma Michael ​: ಬಿಕಿನಿ ಧರಿಸಿ ರ‍್ಯಾಂಪ್ ವಾಕ್​ ಮಾಡಿದ​ ವಿಡಿಯೋಗೆ ಭಾರಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪಾಕಿಸ್ತಾನ ಮೂಲದ ಮಾಡೆಲ್ ರೋಮಾ ಮೈಕೆಲ್, ವಿಡಿಯೋ ಡಿಲೀಟ್​ ಮಾಡಿದ್ದಾರೆ. ಪಾಕ್​ನ ಮೂಲಭೂತವಾದಿಗಳ ಪ್ರತಿಭಟನೆಯ ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲಾಗಿದೆ.

ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್-2024ರ ಸೌಂದರ್ಯ ಸ್ಪರ್ಧೆಯ ಬಿಕಿನಿ ರ‍್ಯಾಂಪ್ ವಾಕ್​​ ವಿಡಿಯೋವನ್ನು ರೋಮಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ವಿಡಿಯೋ ಜಾಲತಾಣದಲ್ಲಿ ವೈರಲ್ ಆಯಿತು. ಇದನ್ನು ನೋಡಿದ ಪಾಕ್​ ಮೂಲಭೂತವಾದಿಗಳು ತೀವ್ರ ಆಕ್ರೋಶ ಹೊರಹಾಕಿದರು. ಯಾವಾಗ ನೆಗೆಟಿವ್​ ಕಾಮೆಂಟ್​ಗಳು ಬರಲು ಆರಂಭಿಸಿತೋ ಇದರಿಂದ ಎಚ್ಚೆತ್ತ ಮಾಡೆಲ್​ ವಿಡಿಯೋ ಡಿಲೀಟ್​ ಮಾಡಿದ್ದಾರೆ.

ವಿಡಿಯೋ ಡಿಲೀಟ್​ ಮಾಡಿದ್ದರೂ ಕೂಡ ರ‍್ಯಾಂಪ್ ವಾಕ್​ನ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನದಲ್ಲಿ ಸಂಪ್ರದಾಯವಾದಿ ಹಾಗೂ ನೈತಿಕ ಪೊಲೀಸ್​ಗಿರಿಯ ಕಾರಣ ವಿಡಿಯೋ ಡಿಲೀಟ್​ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಮಾಡೆಲ್​ನ ಬೆಂಬಲಿಗರು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಉಡುಗೆಯ ಸ್ವಾತಂತ್ರ್ಯವಿಲ್ಲ ಎಂದು ನೆಟ್ಟಿಗರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಮಾಡೆಲ್ ರೋಮಾ ಮೈಕೆಲ್​, ಲಾಹೋರ್ ಮೂಲದವರು. ಬಿಟೆಕ್ ಪದವೀಧರೆಯಾಗಿರುವ ರೋಮಾ, ಓರ್ವ ವೃತ್ತಿಪರ ರೂಪದರ್ಶಿ ಮತ್ತು ನಟಿ. ವಿಶ್ವಾದ್ಯಂತ ಅನೇಕ ಫ್ಯಾಷನ್ ವಿನ್ಯಾಸಕರು ಮತ್ತು ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ಕೇನ್ಸ್ ಫ್ಯಾಶನ್ ವೀಕ್ ಮತ್ತು ದುಬೈ ಫ್ಯಾಶನ್ ಶೋ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ. (ಏಜೆನ್ಸೀಸ್​)