ನ್ಯೂಸ್

ಇಂಗ್ಲೆಂಡ್​ನಲ್ಲಿರೋ ಗುರು ಅರ್ಜಾನ್​ ದೇವ್​ ಗುರುದ್ವಾರಕ್ಕೆ ಹಾನಿ: ಪಾಕ್ ಪ್ರಜೆ ಬಂಧನ​

ನವದೆಹಲಿ: ಇಂಗ್ಲೆಂಡ್​ನ ಡರ್ಬಿ ನಗರದಲ್ಲಿರುವ ಗುರು ಅರ್ಜಾನ್​ ದೇವ್​ ಗುರುದ್ವಾರವನ್ನು ಹಾನಿಗೊಳಿಸಿದ ಆರೋಪದಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬನನ್ನು ಸೋಮವಾರ (ಮೇ 25) ಬಂಧಿಸಲಾಗಿದೆ.

ಈವರೆಗೂ ಆರೋಪಿಯ ಗುರುತು ಪತ್ತೆಯಾಗಿಲ್ಲ. ಆದರೆ, ಗುರುದ್ವಾರವನ್ನು ಹಾನಿಗೊಳಿಸುವ ಮುನ್ನ ಪಾಕಿಸ್ತಾನಿಗರಿಂದ ಬೆಂಬಲ ಕೋರಿ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ಎಂದು ತಿಳಿದುಬಂದಿದೆ.

ಆರೋಪಿಗೆ ಇತರೆ ಗುಂಪಿನ ಸದಸ್ಯರೊಂದಿಗೆ ಸಂಪರ್ಕ ಇರುವ ಸಾಧ್ಯತೆ ಬಗ್ಗೆ ಇಂಗ್ಲೆಂಡ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗುರುದ್ವಾರ ಹಾನಿಗೊಳಿಸಿದ್ದನ್ನು ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ ಹಾಗೂ ಸಿಖ್​ ಸಂಘಟನೆಗಳು ಖಂಡಿಸಿವೆ. ಡರ್ಬಿ ನಗರದಲ್ಲಿನ ಗುರು ಅರ್ಜಾನ್​ ದೇವ್​ ಜೀ ಗುರುದ್ವಾರವನ್ನು ಹಾನಿಗೊಳಿಸಿದ ಆರೋಪದಲ್ಲಿ ಪಾಕ್​ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ವಿಶ್ವದಲ್ಲಿ ಮಾನವೀಯತೆ ಉಳಿಯಬೇಕಾದರೆ ಇಂತಹ ದ್ವೇಷ ಮತ್ತು ಅಸಹಿಷ್ಣುತೆ ಕೊನೆಗೊಳ್ಳಲೇಬೇಕು. ಅದರಲ್ಲೂ ವಿಶ್ವ ಹಿಂದೆಂದೂ ಕಾಣದಂತಹ ಬಿಕ್ಕಟ್ಟಿನಲ್ಲಿರುವ ಸಮಯದಲ್ಲಿ ಇದನ್ನು ಸಹಿಸಲಾಗದು ಎಂದು ಸಿಎಂ ಸಿಂಗ್​ ಟ್ವೀಟ್​ ಮಾಡಿದ್ದಾರೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಘಟನೆ ಸೋಮವಾರ ರಾತ್ರಿ 8:30ರ ಸುಮಾರಿಗೆ ನಡೆದಿದ್ದು, ಗುರುದ್ವಾರದ ಹೆಬ್ಬಾಗಿಲುಗಳನ್ನು ಹಾನಿಗೊಳಿಸಿದ್ದಾನೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)