ನ್ಯೂಸ್

ಪಾಕಿಸ್ತಾನದಿಂದ ಹಾರಿ ಬಂತು ಡ್ರೋನ್; ಗುಂಡಿನ ದಾಳಿ ನಡೆಸಿದ ಬಿಎಸ್​​ಎಫ್​ ಯೋಧರು

ಪಂಜಾಬ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಭದ್ರತಾ ಪರಿಶೀಲನೆಯಲ್ಲಿ ತೊಡಗಿದ್ದ ವೇಳೆ ಪಂಜಾಬ್-ಪಾಕಿಸ್ತಾನ ಗಡಿ ಭಾಗದಲ್ಲಿ ಪಾಕಿಸ್ತಾನ ಮೂಲದ ಡ್ರೋನ್ ಕ್ಯಾಮರಾ, ಭಾರತದ ಭೂಭಾಗ ಪ್ರವೇಶಿಸಿರುವುದನ್ನು ಭಾರತೀಯ ಬಿಎಸ್​​ಎಫ್​ ಯೋಧರು ಪತ್ತೆ ಹಚ್ಚಿದ್ದಾರೆ.

ಮಂಗಳವಾರ ಪಂಜಾಬ್​ನ ಗುರುದಾಸ್​​ಪುರ ಸೆಕ್ಟರ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಬಂದ ಡ್ರೋನ್​ನ ಮೇಲೆ ಬಿಎಸ್​ಎಫ್​ ಪಡೆ ಗುಂಡಿನ ದಾಳಿ ನಡೆಸಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆಯ ವೇಳೆ ಝೇಂಕರಿಸುವ ಶಬ್ದ ಕೇಳಿ ಬಂದಿದೆ. ಈ ವೇಳೆ ಡ್ರೋನ್ ಕ್ಯಾಮರಾ ಎಂದು ತಿಳಿದು ಬಂದಿದ್ದು, ನಂತರ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.

ಡ್ರೋನ್​ ಕ್ಯಾಮರಾವನ್ನು ವಶಕ್ಕೆ ಪಡೆಯಲಾಗಿದೆ. ಯಾವೆಲ್ಲಾ ಭೂಪ್ರದೇಶವನ್ನು ಚಿತ್ರೀಕರಿಸಲಾಗಿದೆ ಎನ್ನುವುದನ್ನು ಪರೀಕ್ಷಿಸಬೇಕಿದೆ. ಕ್ಯಾಮರಾ ಪತ್ತೆಯಾದ ಭಾಗದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಬಿಎಸ್‌ಎಫ್​ನ ಡಿಐಜಿ ಪ್ರಭಾಕರ್ ಜೋಶಿ ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಪಂಜಾಬ್‌ ಪ್ರದೇಶದ ಭಾರತ-ಪಾಕಿಸ್ತಾನ ಗಡಿಯು ಅಕ್ರಮ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು ಹಾಗೂ ಅಕ್ರಮ ವಸ್ತುಗಳನ್ನು ಸಾಗಿಸಲು ದುಷ್ಕರ್ಮಿಗಳು ಹೆಚ್ಚು ಬಳಸುವ ಮಾರ್ಗಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ.