ನ್ಯೂಸ್

ಗೋವಾ: ಪಾಕಿಸ್ತಾನ ಮೂಲದ ಕ್ರಿಶ್ಚಿಯನ್‌ಗೆ ಮೊದಲ ಸಿಎಎ ಪೌರತ್ವ

ಪಣಜಿ: ಪಾಕಿಸ್ತಾನ ಮೂಲದ 78 ವರ್ಷ ವಯಸ್ಸಿನ ಕ್ರಿಶ್ಚಿಯನ್ ಧರ್ಮದ ಜೋಸೆಫ್ ಪ್ರಾನ್ಸಿಸ್ ಫೆರೀರಾ ಎನ್ನುವ ವ್ಯಕ್ತಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬುಧವಾರ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಅವರು ಪೌರತ್ವ ( ತಿದ್ದುಪಡಿ) ಕಾಯ್ದೆಯ (ಸಿಎಎ) ಅನುಸಾರ ಭಾರತದ ಪೌರತ್ವ ಪಡೆದ ಗೋವಾದ ಮೊದಲ ವ್ಯಕ್ತಿಯಾಗಿದ್ದಾರೆ.

ದಕ್ಷಿಣಾ ಗೋವಾದ ಪರೋಡ ಗ್ರಾಮದವರಾದ ಜೋಸೆಫ್ ಫ್ರಾನ್ಸಿಸ್ ಪಿರೇರಾ ಅವರು ಅಧ್ಯಯನಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದವರು. ನಂತರ ಉದ್ಯೋಗ ಪಡೆದು ಅಲ್ಲಿಯೇ ನೆಲೆಸಿದ್ದರು. ಪಾಕಿಸ್ತಾನದ ಪೌರತ್ವ ಪಡೆದು ಅವರು ಕಾರಚಿಯಲ್ಲಿ ವಾಸವಾಗಿದ್ದರು. ಬಳಿಕ 2013 ರಲ್ಲಿ ಭಾರತಕ್ಕೆ ಹಿಂದಿರುಗಿದ್ದರು.

ಜೋಸೆಫ್ ಫ್ರಾನ್ಸಿಸ್ ಅವರು ಗೋವಾದ ಮಹಿಳೆಯನ್ನು ವಿವಾಹವಾಗಿದ್ದರು, ಭಾರತದ ಪೌರತ್ವ ಪಡೆಯುವ ನಿಟ್ಟಿನಲ್ಲಿ ಅವರು ಹಲವು ಬಾರಿ ತೊಡಕನ್ನು ಎದುರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವು 1955 ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದರಿಂದಾಗಿ ಅವರಿಗೆ ಭಾರತದ ಪೌರತ್ವ ಪಡೆಯುವಲ್ಲಿ ಸಾಧ್ಯವಾಯಿತು ಎಂದು ಅವರು ಹೇಳಿದರು.

ಗೋವಾದಲ್ಲಿ ಭಾರತದ ಪೌರತ್ವ ಪಡೆಯಲು ಅರ್ಹರಾದವರು ಹಲವರಿದ್ದು ಅವರ ಬಗ್ಗೆ ಸರ್ಕಾರ ಸಮೀಕ್ಷೆ ಆರಂಭಿಸಿದೆ, ಅರ್ಹರಾದವರನ್ನು ಸರ್ಕಾರವನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು CAA ಅನ್ನು ಡಿಸೆಂಬರ್ 2019 ರಲ್ಲಿ ಜಾರಿಗೊಳಿಸಲಾಗಿದೆ. ಇದರಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದ್ದಾರೆ.