LoC: ಜಮ್ಮು, ಜೈಸಲ್ಮೇರ್ ಮತ್ತು ಫಿರೋಜ್‌ಪುರದಲ್ಲಿ ಶುಕ್ರವಾರ ಸಂಜೆ ವಿದ್ಯುತ್ ಕಡಿತಗೊಂಡ ಬಗ್ಗೆ ಇದೀಗ ವರದಿಯಾಗಿದೆ. ಅಲ್ಲದೆ, ಜಮ್ಮುವಿನಲ್ಲಿಯೂ ಸಹ ದೊಡ್ಡ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ.
ಏತನ್ಮಧ್ಯೆ, ಶುಕ್ರವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ಮತ್ತೆ ಶಸ್ತ್ರಾಸ್ತ್ರ ಮತ್ತು ಫಿರಂಗಿ ಗುಂಡಿನ ದಾಳಿ ನಡೆಸುತ್ತಿದ್ದಂತೆ ಗುಂಡಿನ ಸದ್ದು ಮತ್ತು ಸ್ಫೋಟಗಳು ಕೇಳಿಬಂದವು ಎಂದು ವರದಿ ಉಲ್ಲೇಖಿಸಿದೆ.
ಉಧಂಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್‌ಕೋಟ್ ಸೇರಿದಂತೆ ಇತರ ಪ್ರದೇಶಗಳ ಮೇಲೆ ದಾಳಿ ಮಾಡಲು ಕಳುಹಿಸಿದ್ದ ಪಾಕ್ ಡ್ರೋನ್‌ಗಳನ್ನು ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ಹೊಡೆದುರುಳಿಸಿವೆ.
ಬುಧವಾರ ಮತ್ತು ಗುರುವಾರ ರಾತ್ರಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ (ಐಬಿ) ದೊಡ್ಡ ಪ್ರಮಾಣದ ಪ್ರತಿ-ಡ್ರೋನ್ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಿತು .
ಆಪರೇಷನ್ ಸಿಂಧೂರ ಕುರಿತು ಪ್ರಧಾನಿ ನರೇಂದ್ರ ಮೋದಿ, ಮೂರು ಸೇನಾ ಮುಖ್ಯಸ್ಥರೊಂದಿಗೆ (ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ) ಉನ್ನತ ಮಟ್ಟದ ಸಭೆ ನಡೆಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಸಭೆಗಾಗಿ ನವದೆಹಲಿಯಲ್ಲಿರುವ ಪ್ರಧಾನಿಯವರ ನಿವಾಸಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)