ನ್ಯೂಯಾರ್ಕ್: ಪಾಕಿಸ್ತಾನವು ಅಫ್ಘಾನಿಸ್ತಾನ ಮತ್ತು ಭಾರತದಲ್ಲಿ ಶಾಲೆಗಳು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಈ ಮೂಲಕ ವಿಶ್ವಸಂಸ್ಥೆಯ ಮಕ್ಕಳು ಮತ್ತು ಸಶಸ್ತ್ರ ಸಂಘರ್ಷದ ಕಾರ್ಯಸೂಚಿಯನ್ನು ಉಲ್ಲಂಘಿಸಿದೆ ಎಂದು ಸೋಮವಾರ(ಅಕ್ಟೋಬರ್ 13,) ಬಿಜೆಪಿ ನಾಯಕ ನಿಶಿಕಾಂತ್ ದುಬೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಅಧಿವೇಶನದಲ್ಲಿ ಮಾತನಾಡಿದ ದುಬೆ, ಮಕ್ಕಳ ಸಹಾಯವಾಣಿ ಮತ್ತು ಮಕ್ಕಳ ಕಳ್ಳಸಾಗಣೆಯನ್ನು ಎದುರಿಸಲು ತೆಗೆದುಕೊಂಡ ಉಪಕ್ರಮಗಳ ಮೂಲಕ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯಲು ಭಾರತದ ಪ್ರಯತ್ನಗಳನ್ನು ಗುರುತಿಸಿದ್ದಕ್ಕಾಗಿ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದರು.
ವಿಶ್ವಸಂಸ್ಥೆಯ ಸಿಎಸಿ (ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ) ಕಾರ್ಯಸೂಚಿಯನ್ನು ಉಲ್ಲಂಘಿಸುವ ಅತ್ಯಂತ ಕೆಟ್ಟ ದೇಶಗಳಲ್ಲಿ ಪಾಕಿಸ್ತಾನವೂ ಒಂದಾಗಿದೆ. ಪಾಕ್ನೊಳಗೆ ಮಾತ್ರವಲ್ಲದೆ ನೆರೆಯ ಪ್ರದೇಶಗಳಲ್ಲಿಯೂ ಗಂಭೀರ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ.
ಅಲ್ಲದೆ, 2025ರ ಸಿಎಸಿ ಪ್ರಧಾನ ಕಾರ್ಯದರ್ಶಿಯ ವರದಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಿಂದ ಸಾಕ್ಷಿಯಾಗಿರುವಂತೆ, ತಮ್ಮ ಗಡಿಯೊಳಗೆ ಮಕ್ಕಳ ಮೇಲಿನ ಗಂಭೀರ ದೌರ್ಜನ್ಯಗಳಿಂದ ವಿಶ್ವದ ಗಮನವನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನದ ಪ್ರಯತ್ನವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ದುಬೆ ಕಿಡಿಕಾರಿದ್ದಾರೆ.
ಯುಎನ್‌ಜಿಎಯಲ್ಲಿ ಸಂಸದೀಯ ನಿಯೋಗದ ನೇತೃತ್ವ ವಹಿಸಿರುವ ದುಬೆ, ಅಫ್ಘಾನಿಸ್ತಾನ ಗಡಿಯ ಸಮೀಪವಿರುವ ಪ್ರದೇಶಗಳಲ್ಲಿ ಪಾಕಿಸ್ತಾನದ ಸೇನೆಯು ನಡೆಸಿದ ಗಡಿಯಾಚೆಗಿನ ದಾಳಿಗಳು ಮತ್ತು ವೈಮಾನಿಕ ದಾಳಿಗಳಿಂದಾಗಿ ಅನೇಕ ಅಫ್ಘಾನ್ ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೆ, 2025 ರ ಮೇ ತಿಂಗಳಲ್ಲಿ ಭಾರತದ ಗಡಿ ಗ್ರಾಮಗಳ ಮೇಲೆ ಪಾಕಿಸ್ತಾನಿ ಸೇನೆ ನಡೆಸಿದ ಗುಂಡಿನ ದಾಳಿಯಿಂದ ಅಮಾಯಕ ಜನರು ಸಾವನ್ನಪ್ಪಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಇಂತಹ ಕೃತ್ಯಗಳಲ್ಲಿ ಭಾಗಿಯಾದ ನಂತರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುವುದು ಪಾಕಿಸ್ತಾನದ ಅತ್ಯಂತ ನಚಿಕೆಯಾಗುತ್ತದೆ ಎಂದು ದುಬೆ ಖಂಡಿಸಿದ್ದಾರೆ.
ಆಪರೇಷನ್ ಸಿಂಧೂರದ ಸಮಯದಲ್ಲಿ , ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಚೆನ್ನಾಗಿ ಯೋಚಿಸಿ ದಾಳಿ ನಡೆಸಿ ಹಲವಾರು ಭಯೋತ್ಪಾದಕರನ್ನು ಕೊಂದಿತು ಎಂದು ದುಬೆ ತಿಳಿಸಿದ್ದಾರೆ. ಅಲ್ಲದೆ, ಪಾಕಿಸ್ತಾನವು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳಬೇಕು. ಈ ಯುಎನ್ ವೇದಿಕೆಯಲ್ಲಿ ಉಪದೇಶ ಮಾಡುವುದನ್ನು ನಿಲ್ಲಿಸಬೇಕು. ಪಾಕ್ ತನ್ನ ಗಡಿಯೊಳಗಿನ ಮಕ್ಕಳನ್ನು ರಕ್ಷಿಸಲು ಕಾರ್ಯನಿರ್ವಹಿಸಬೇಕು ಮತ್ತು ತನ್ನ ಗಡಿಯೊಳಗಿನ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ದುಬೆ ಹೇಳಿದ್ದಾರೆ. (ಏಜೆನ್ಸೀಸ್)