ಇಸ್ಲಾಮಾಬಾದ್: ಪಾಕಿಸ್ತಾನದ(Pakistan) ರಾಜಧಾನಿಯಲ್ಲಿ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕಾರ್ಯಕರ್ತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಒತ್ತಾಯಿಸಿ ಬೀದಿಗಿಳಿದ ಪಿಟಿಐ ಬೆಂಬಲಿಗರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದಾರೆ. ಹಿಂಸಾಚಾರದಲ್ಲಿ ಆರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಹಾಗು ಪಿಟಿಐನ ಇಬ್ಬರು ಸದಸ್ಯರು ಸಾವನ್ನಪ್ಪಿರುವುದಾಗಿ ಮಂಗಳವಾರ(ನವೆಂಬರ್ 26) ಬೆಳಕಿಗೆ ಬಂದಿದೆ.
ಇದನ್ನು ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ; ಕ್ರೆಮ್ಲಿನ್ ಹೇಳಿಕೆಯಲ್ಲಿ ತಿಳಿದಿಷ್ಟು..| Vladimir Putin
ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಬಲಪ್ರಯೋಗ ಮಾಡಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಇಸ್ಲಾಮಾಬಾದ್‌ನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ದುಷ್ಕರ್ಮಿಗಳನ್ನು ಎದುರಿಸಲು ಆರ್ಟಿಕಲ್ 245ರ ಅಡಿಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ಆಕ್ರಮಣಕಾರಿಯಾದ ನಂತರ ಸೇನೆಯನ್ನು ಕರೆಸಲಾಗಿದೆ ಎಂದು ಸ್ಥಳಿಯ ಮಾಧ್ಯಮದಲ್ಲಿ ವರದಿಯಾಗಿದೆ.
ಪ್ರತಿಭಟನಾಕಾರರ ಮೇಲೆ ರೇಂಜರ್‌ಗಳು ಗುಂಡು ಹಾರಿಸಿದ್ದು ಅದರಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಶಾಂತಿಯುತವಾಗಿ ಚಲಿಸುತ್ತಿದ್ದ ಪಕ್ಷದ ಕಾರ್ಯಕರ್ತರ ಬೆಂಗಾವಲು ಪಡೆಯ ಮೇಲೆ ಮೊದಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಲಾಯಿತು ಮತ್ತು ನಂತರ ರೇಂಜರ್‌ಗಳು ನಿರಾಯುಧ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಪಿಟಿಐ ಮುಖಂಡರು ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ, ಕೆಪಿ ಸಿಎಂ ಅಲಿ ಅಮೀನ್ ಗಂದಾಪುರ್ ಮತ್ತು ಪಕ್ಷದ ಮುಖಂಡರು ಇಸ್ಲಾಮಾಬಾದ್ ಕಡೆಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದರು. ಪಿಟಿಐ ಕಾರ್ಯಕರ್ತರನ್ನು ತಡೆಯಲು ಇಸ್ಲಾಮಾಬಾದ್‌ಗೆ ಹೋಗುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಯಿತು. ಹೀಗಿದ್ದರೂ ಪಿಟಿಐ ಕಾರ್ಯಕರ್ತರನ್ನು ತಡೆಯಲಾಗದೆ ಇಸ್ಲಾಮಾಬಾದ್ ನಗರ ಕಳೆದ ಎರಡು ದಿನಗಳಿಂದ ರಣರಂಗವಾಗಿ ಮಾರ್ಪಟ್ಟಿದೆ.
ಇಸ್ಲಾಮಾಬಾದ್‌ಗೆ ಹೋಗುವ ಎಲ್ಲಾ ರಸ್ತೆಗಳನ್ನು ಶಿಪ್ಪಿಂಗ್ ಕಂಟೈನರ್‌ಗಳಿಂದ ನಿರ್ಬಂಧಿಸಲಾಗಿದೆ. ಮತ್ತು ಪ್ರತಿಭಟನಾಕಾರರು ಬೆಂಕಿ ಹಚ್ಚಲು ಪ್ರಾರಂಭಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಪಾಕಿಸ್ತಾನ ಪೊಲೀಸರ ಕೈಯಿಂದ ಹೊರಗುಳಿದಿದೆ. ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 245A ಕಲಂ ಅನ್ನು ಜಾರಿಗೆ ತರಲು ನಿರ್ಧರಿಸಿದೆ. ಸರ್ಕಾರಕ್ಕೆ ಸಹಾಯ ಮಾಡಲು ಇಸ್ಲಾಮಾಬಾದ್ ರಾಜಧಾನಿ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಸೇನೆಯನ್ನು ನಿಯೋಜಿಸಲು ನಿರ್ಧರಿಸಿದೆ. ಕಂಡಲ್ಲಿ ಗುಂಡು ಹಾರಿಸುವಂತೆ ಸೇನೆಗೆ ಆದೇಶವನ್ನೂ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಪಿಟಿಐ ಬೆಂಗಾವಲು ಪಡೆ ಇಸ್ಲಾಮಾಬಾದ್ ಪ್ರವೇಶಿಸಿದ ನಂತರ ನಡೆದ ಹಿಂಸಾತ್ಮಕ ಘಟನೆಗಳನ್ನು ಪ್ರಧಾನಿ ಶೆಹಬಾಜ್ ಷರೀಫ್ ಖಂಡಿಸಿದ್ದಾರೆ. ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ ಎಂದು ಷರೀಫ್ ಹೇಳಿದ್ದಾರೆ. ಮೊಹ್ಸಿನ್ ನಖ್ವಿ ಮತ್ತು ಬಿಲಾವಲ್ ಭುಟ್ಟೊ ಅವರು ಪ್ರತಿಭಟನೆಯ ಸಮಯದಲ್ಲಿ ನಡೆದ ಹಿಂಸಾಚಾರವನ್ನು 'ಭಯೋತ್ಪಾದನೆ' ಎಂದು ಕರೆದಿದ್ದಾರೆ ಮತ್ತು ಉತ್ತರದಾಯಿತ್ವವನ್ನು ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.(ಏಜೆನ್ಸೀಸ್)