ನ್ಯೂಸ್

ಜಾಗತಿಕ ಭಯೋತ್ಪಾದಕರ ಮೇಲೆ ಪಾಕ್‌ಗೆ ಉಕ್ಕಿದೆ ಪ್ರೀತಿ- ಏನು ಮಾಡಿದೆ ನೋಡಿ..

ಕರಾಚಿ: ತಾನು ಯಾವತ್ತಿಗೂ ಭಯೋತ್ಪಾದನಾ ವಿರೋಧಿ, ತನ್ನ ನೆಲದಲ್ಲಿ ಉಗ್ರರು ಇಲ್ಲ ಎಂದು ಮೇಲಿಂದ ಮೇಲೆ ಪಾಕಿಸ್ತಾನ ಹೇಳುತ್ತಾ ಬಂದಿದ್ದರೂ ಪಾಕ್‌ ನೆಲ ಉಗ್ರರಿಗೆ ಶ್ರೀರಕ್ಷೆ ಎಂಬುದನ್ನು ಸಾಬೀತು ಮಾಡುತ್ತಲೇ ಇದೆ.

26/11ರಂದು ಮುಂಬೈ ಮೇಲೆ ನಡೆದ ಭಯಾನಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ ಸೇರಿದಂತೆ ಆರು ಮಂದಿ ಭಯೋತ್ಪಾದಕರ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಇದಾಗಲೇ ಆದೇಶವಿದ್ದ ಹಿನ್ನೆಲೆಯಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ನಾಟಕವಾಡಿದ್ದ ಪಾಕಿಸ್ತಾನ. ಇದೀಗ ಬ್ಯಾಂಕ್‌ ಖಾತೆಯಲ್ಲಿ ವ್ಯವಹರಿಸಲು ಇವರಿಗೆ ಅನುವು ಮಾಡಿಕೊಟ್ಟಿರುವ ಬಗ್ಗೆ ವರದಿಯಾಗಿದೆ.

ಈ ಮೂಲಕ, ಭಯೋತ್ಪಾದನಾ ಕೃತ್ಯಕ್ಕೆ ಸುಲಭದಲ್ಲಿ ಹಣಕಾಸು ವ್ಯವಹಾರ ನಡೆಸಲು ಈ ಉಗ್ರರಿಗೆ ಅನುವು ಮಾಡಿಕೊಡಲಾಗಿದೆ.

ವರದಿಗಳ ಪ್ರಕಾರ, ಹಫೀಜ್ ಸಯೀದ್ ಸೇರಿದಂತೆ ಜಮಾತ್-ಉದ್-ದವಾ (ಜೆಯುಡಿ) ಮತ್ತು ಲಷ್ಕರ್-ಎ-ತಯಬಾದ(ಎಲ್‌ಇಟಿ) ಅಗ್ರ ಐದು ನಾಯಕರ ಬ್ಯಾಂಕ್ ಖಾತೆಗಳನ್ನು ಪಾಕಿಸ್ತಾನ ಸರ್ಕಾರ ಮರುಸ್ಥಾಪಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಔಪಚಾರಿಕ ಅನುಮೋದನೆ ಪಡೆದ ನಂತರ ಭಯೋತ್ಪಾದಕರ ಬ್ಯಾಂಕ್ ಖಾತೆಗಳನ್ನು ಮರುಸ್ಥಾಪಿಸಲಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ‌ ಹೇಳುತ್ತಿದ್ದರೂ, ಈ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಅವರು ನೀಡಿಲ್ಲ. ಯುಎನ್‌ಎಸ್‌ಸಿ ಕೂಡ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ.

ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಅಬ್ದುಲ್ ಸಲಾಮ್ ಭುಟ್ಟವಿ, ಹಾಜಿ ಎಂ ಅಶ್ರಫ್, ಯಾಹ್ಯಾ ಮುಜಾಹಿದ್ ಮತ್ತು ಜಾಫರ್ ಇಕ್ಬಾಲ್ ಇವರೆಲ್ಲರೂ ಜಾಗತಿಕ ಭಯೋತ್ಪಾದಕರು. ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಇವರು ಜೈಲು ಪಾಲಾಗಿದ್ದು, ಇದೀಗ ಅವರ ದಾರಿಯನ್ನು ಪ್ರಧಾನಿ ಸುಲಭಗೊಳಿಸಿದ್ದಾರೆ. ಅವರ ಕುಟುಂಬ ನಿರ್ವಹಣೆಗಾಗಿ ಬ್ಯಾಂಕ್‌ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂಬ ಸಮಜಾಯಿಷಿ ಬೇರೆ ನೀಡಿದ್ದಾರೆ ಇಮ್ರಾನ್‌ ಖಾನ್‌. (ಏಜೆನ್ಸೀಸ್‌)