ನ್ಯೂಸ್

ಸಿಂಧೂ ನದಿ ನೀರಿನ ಸಂಬಂಧ ಪಾಕ್ ಪ್ರಧಾನಿ ಎಚ್ಚರಿಕೆ; ‘ಬ್ರಹ್ಮೋಸ್ ಹೈ ಹಮಾರೆ ಪಾಸ್’ ಎಂದು ಅಸಾದುದ್ದೀನ್ ಓವೈಸಿ ತಿರುಗೇಟು | Asaduddin Owaisi

Asaduddin Owaisi: ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಭಾರತಕ್ಕೆ ನೀಡಿದ ಎಚ್ಚರಿಕೆಗೆ, ಎಐಎಂಐಎಂ ಮುಖ್ಯಸ್ಥ ಮತ್ತು ಹೈದಾರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿ, ಅಸಂಬದ್ಧವಾಗಿ ಮಾತನಾಡಬಾರದು ನಮ್ಮ ಬಳಿ ಬ್ರಹ್ಮೋಸ್ ಕ್ಷಿಪಣಿಗಳಿವೆ ಎಂದು ಬುಧವಾರ(ಆಗಸ್ಟ್​ 13) ತಿರುಗೇಟು ನೀಡಿದ್ದಾರೆ.

ಹೈದರಾಬಾದ್​ನಲ್ಲಿ ಮಾತನಾಡಿದ ಅವರು, ಪಾಕ್​ನ ಒಂಬತ್ತು ವಾಯುನೆಲೆಗಳನ್ನು ಭಾರತ ಹೊಡೆದುರುಳಿಸಿದೆ ಎಂಬ ಸುದ್ದಿ ಬಂದಾಗ ಅವರು ಈಜು ಉಡುಪಿನಲ್ಲಿದ್ದರು. ಭಾರತ ಈಗಾಗಲೇ ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿಸಿದೆ. ನಿಮ್ಮ ಮಾರ್ಗಗಳನ್ನು ಸರಿಪಡಿಸುವ ಬದಲು, ನಮಗೆ ಬೆದರಿಕೆ ಹಾಕುತ್ತಿದ್ದೀರಿ. ಈ ರೀತಿ ಅಸಂಬದ್ಧವಾಗಿ ಮಾತನಾಡಬಾರದು.ಇದ್ಯಾವೂದು ಭಾರತದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪಾಕ್ ಪ್ರಧಾನಿ, "ಶತ್ರು (ಭಾರತ) ಪಾಕಿಸ್ತಾನದಿಂದ ಒಂದು ಹನಿ ನೀರನ್ನು ಸಹ ಕಸಿದುಕೊಳ್ಳಲು ಸಾಧ್ಯವಿಲ್ಲ. ನೀವು ನಮ್ಮ ನೀರನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದೀರಿ. ನೀವು ಅಂತಹ ಕ್ರಮಕ್ಕೆ ಪ್ರಯತ್ನಿಸಿದರೆ, ಪಾಕಿಸ್ತಾನವು ನಿಮಗೆ ಎಂದಿಗೂ ಮರೆಯಲಾಗದ ಪಾಠವನ್ನು ಕಲಿಸುತ್ತದೆ. ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಪಾಕ್​ ತನ್ನ ಹಕ್ಕುಗಳನ್ನು ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ಹೇಳಿದ್ದರು.

26 ಅಮಾಯಕರನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನವು "ಭಯೋತ್ಪಾದನೆಗೆ ತನ್ನ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ 1960 ರ ನೀರು ಹಂಚಿಕೆ ಒಪ್ಪಂದವನ್ನು ತಡೆಹಿಡಿಯಲಾಗುವುದು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಇತ್ತೀಚೆಗೆ ಅಮೆರಿಕಾದ ನೆಲದಲ್ಲಿ ನಿಂತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, "ನಮ್ಮದು ಪರಮಾಣು ಹೊಂದಿದ ರಾಷ್ಟ್ರ, ನಾವು ಪತಗೊಳ್ತೇವೆ ಅಂತ ಗೊತ್ತಾದ್ರೆ, ನಮ್ಮೊಂದಿಗೆ ಅರ್ಧದಷ್ಟು ಪ್ರಪಂಚವನ್ನು ನಾಶಪಡಿಸುತ್ತೇವೆ" ಎಂದು ಬೆದರಿಕೆ ಹಾಕಿದ್ದರು.

ಮುನೀರ್ ಬೆದೆರಿಕೆಗೆ ಪ್ರತಿಕ್ರಿಯಿಸಿದ್ದ ಭಾರತೀಯ ವಿದೇಶಾಂಗ ಇಲಾಖೆ, ಇಂತಹ ಹೇಳಿಕೆಗಳು ಬೇಜವಾಬ್ದಾರಿತನದಿಂದ ಕೂಡಿವೆ. ಭಾರತವು ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿರುಗೇಟು ನೀಡಿತ್ತು. (ಏಜೆನ್ಸೀಸ್)