ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif) ಅವರು ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್(ಪಿಐಎ)ನ ವಿವಾದಾತ್ಮಕ ಸಾಮಾಜಿಕ ಜಾಲತಾಣದ ಪೋಸ್ಟ್ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಪೋಸ್ಟ್ ನ್ಯೂಯಾರ್ಕ್ನಲ್ಲಿ 2001ರ ವಿಶ್ವ ವ್ಯಾಪಾರ ಕೇಂದ್ರದ ದಾಳಿಯನ್ನು ಹೋಲುತ್ತದೆ ಎಂಬ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) 4 ವರ್ಷಗಳ ನಿಷೇಧವನ್ನು ಎದುರಿಸಿದ ನಂತರ ಮತ್ತೆ ಪ್ಯಾರಿಸ್‌ಗೆ ಸೇವೆಗಳನ್ನು ಪ್ರಾರಂಭಿಸಿದೆ. ಆದರೆ ಪಿಐಎ ತನ್ನ ಸೇವೆಯನ್ನು ಪ್ರಾರಂಭಿಸುವ ಬದಲು ತನ್ನ ಜಾಹೀರಾತಿನಿಂದ ಸುದ್ದಿಯಾಗಿತ್ತು. ಪಿಐಎಯ ಈ ಜಾಹೀರಾತನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಮಾಡಲಾಗುತ್ತಿದೆ.
ಜನವರಿ 10ರಂದು ಮಾಡಲಾದ ಈ ಪೋಸ್ಟ್ಗೆ ನಾವು ಇಂದು ಪ್ಯಾರಿಸ್‌ಗೆ ಆಗಮಿಸುತ್ತೇವೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಕೆಲ ದಿನಗಳಲ್ಲಿ ಈ ಪೋಸ್ಟ್ ಅನ್ನು 21 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಈ ಪೋಸ್ಟ್ ಯುನೈಟೆಡ್ ಸ್ಟೇಟ್ಸ್‌ನಲ್ಲಿನ 9/11 ಭಯೋತ್ಪಾದಕ ದಾಳಿಯನ್ನು ಹೋಲುತ್ತದೆ ಎಂಬ ಕಾರಣಕ್ಕೆ ವಿವಾದವನ್ನು ಸೃಷ್ಟಿಸಿದೆ. 2001 ಸೆಪ್ಟೆಂಬರ್ 11ರಂದು ಹೈಜಾಕ್ ಮಾಡಿದ ವಿಮಾನಗಳು ವರ್ಲ್ಡ್ ಟ್ರೇಡ್ ಸೆಂಟರ್, ಪೆಂಟಗನ್ ಮತ್ತು ಪೆನ್ಸಿಲ್ವೇನಿಯಾದ ಒಂದು ಮೈದಾನದ ಅವಳಿ ಗೋಪುರಗಳಿಗೆ ಅಪ್ಪಳಿಸಿದಾಗ ಸುಮಾರು 3,000 ಜನರು ಮೃತಪಟ್ಟಿದ್ದರು.
ಪಾಕ್ ಸಂಸತ್ತಿನ ಅಧಿವೇಶನದಲ್ಲಿ ಹಣಕಾಸು ಸಚಿವ ಇಶಾಕ್ ದಾರ್ ಅವರು ಹಗರಣದ ತನಿಖೆಗೆ ಪ್ರಧಾನಿ ಷರೀಫ್ ನಿರ್ದೇಶಿಸಿದ್ದಾರೆ ಎಂದು ಖಚಿತಪಡಿಸಿದರು. ಈ ಜಾಹೀರಾತನ್ನು ಯಾರು ಕಲ್ಪಿಸಿದ್ದಾರೆಂದು ತನಿಖೆ ಮಾಡಲು ಪ್ರಧಾನಮಂತ್ರಿ [ಅಧಿಕಾರಿಗಳಿಗೆ] ನಿರ್ದೇಶಿಸಿದ್ದಾರೆ. ಇದು ಅಸಂಬದ್ಧವಾಗಿದೆ ಎಂದು ದಾರ್ ಹೇಳಿದರು.
ನಾಲ್ಕು ವರ್ಷಗಳ ನಂತರ ಪಾಕಿಸ್ತಾನದ ವಿಮಾನವು ಮೊದಲ ಬಾರಿಗೆ ಜನವರಿ 10ರಂದು ಪ್ಯಾರಿಸ್ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಯಿತು. ಪ್ಯಾರಿಸ್ ಇತ್ತೀಚೆಗೆ ಪಿಐಎ ವಿಮಾನಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದರೂ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಿಮಾನಯಾನ ಸಂಸ್ಥೆಯು ಕಾರ್ಯನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ.(ಏಜೆನ್ಸೀಸ್)