ನ್ಯೂಸ್

ಪಾಕ್​ ಹೈಕಮಿಷನ್​​ ಅಧಿಕಾರಿಗೆ 24 ಗಂಟೆಯೊಳಗೆ ಭಾರತ ಬಿಟ್ಟು ತೊಲಗುವಂತೆ ಆದೇಶ: ವಿದೇಶಾಂಗ ಸಚಿವಾಲಯ | High Commission

High Commission: ಭಾರತದಲ್ಲಿ ತನ್ನ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ಅಧಿಕಾರಿಯನ್ನು ಭಾರತ ಸರ್ಕಾರವು ಗ್ರಾನಾ ನಾನ್ ಗ್ರಾಟಾ(ವಿದೇಶಿ ರಾಜತಾಂತ್ರಿಕರನ್ನು ಆತಿಥೇಯ ರಾಷ್ಟ್ರದಲ್ಲಿ ಸ್ವಾಗತಿಸದಿದ್ದಾಗ ಬಳಸುವ ಪದ) ಎಂದು ಘೋಷಿಸಿದೆ.

ಅಲ್ಲದೆ ಆ ಅಧಿಕಾರಿಗೆ 24 ಗಂಟೆಗಳ ಒಳಗೆ ಭಾರತವನ್ನು ತೊರೆಯುವಂತೆ ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.

ಈ ಕುರಿತು ಪಾಕಿಸ್ತಾನ ಹೈಕಮಿಷನ್‌ನ ಚಾರ್ಜ್ ಡಿ'ಅಫೇರ್ಸ್‌ಗೆ ಇಂದು ಆದೇಶ ಹೊರಡಿಸಲಾಗಿದೆ. ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ರಾಜತಾಂತ್ರಿಕರು ಅಥವಾ ಅಧಿಕಾರಿಗಳು ತಮ್ಮ ಸವಲತ್ತುಗಳು ಮತ್ತು ಸ್ಥಾನಮಾನವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳದಂತೆ ಕಟ್ಟುನಿಟ್ಟಾಗಿ ಖಚಿತಪಡಿಸಿಕೊಳ್ಳುವಂತೆ ಅವರನ್ನು ಕೇಳಲಾಯಿತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಹಿಂದೆ ಅಂದರೆ ಮೇ.13ರಂದು ಪಾಕಿಸ್ತಾನಿ ಅಧಿಕಾರಿಯೊಬ್ಬನನ್ನು ಇದೇ ರೀತಿ ಉಚ್ಛಾಟನೆ ಮಾಡಲಾಗಿತ್ತು. ಇದೀಗ ಇದು ಎರಡನೇ ಪ್ರಕರಣವಾಗಿದೆ.

ಏ.22ರಂದು ಪೆಹಲ್ಗಾಮ್​ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರನ್ನು ಉಗ್ರರರು ಕೊಂದು ಹಾಕಿದ್ದರು. ಬಳಿಕ ಇದಕ್ಕೆ ಪ್ರತಿಕಾರವಾಗಿ ಭಾರತ ಆಪರೇಷನ್​ ಸಿಂಧೂರ ಕಾರ್ಯಚರಣೆ ಮಾಡುವ ಮೂಲಕ ಪಾಕ್​ನಲ್ಲಿನ ಉಗ್ರ ತರಬೇತಿ ಕೇಂದ್ರಗಳನ್ನು ಉಡೀಸ್​ ಮಾಡಿತ್ತು. ಅಂದಿನಿಂದ ಎರಡು ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ. ಈ ಹಿನ್ನೆಲೆ ಇದರ ಭಾಗವಾಗಿ ಪಾಕ್​ ಅಧಿಕಾರಿಯನ್ನು ಭಾರತದಿಂದ ಎತ್ತಂಗಡಿ ಮಾಡಲಾಗಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್​)