ನ್ಯೂಸ್

ಇಮ್ರಾನ್​ಖಾನ್​ ಪಕ್ಷ ನಿಷೇಧಿಸಲು ನಿರ್ಧರಿಸಿದ ಪಾಕ್​ ಸರ್ಕಾರ; ಹೇಳಿದ ಕಾರಣವೇನು ಗೊತ್ತಾ?

ಇಸ್ಲಾಮಾಬಾದ್​​​: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್​​-ಇ-ಇನ್ಸಾಫ್ (ಪಿಟಿಐ) ಪಕ್ಷವನ್ನು ನಿಷೇಧಿಸಲು ಪಾಕ್​​ನ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್ ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ್ ತೆಹ್ರೀಕ್​​-ಇ-ಇನ್ಸಾಫ್​​​(ಪಿಟಿಐ) ಒಟ್ಟಿಗೆ ಬಾಳಲು ಸಾಧ್ಯವಿಲ್ಲ. ದೇಶವು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಬೇಕಾದರೆ, ಪಿಟಿಐ ಅಸ್ತಿತ್ವವನ್ನು ಕೊನೆಗೊಳಿಸುವುದು ಅವಶ್ಯಕ. ಮಾಜಿ ಪ್ರಧಾನಿಯವರ ಪಕ್ಷವನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡುತ್ತೇವೆ ಎಂದು ಅವರು ಹೇಳಿದರು. ಮೇ 9ರ ಗಲಭೆಗಳು, ವಿದೇಶಿ ಹಣ ಮತ್ತು ಸೈಫರ್ ಪ್ರಕರಣ ಮತ್ತು ಅಮೆರಿಕದಲ್ಲಿ ಅಂಗೀಕರಿಸಿದ ನಿರ್ಣಯವನ್ನು ನೋಡಿದಾಗ ಪಾಕಿಸ್ತಾನ್ ತೆಹ್ರೀಕ್​​-ಇ-ಇನ್ಸಾಫ್​​​ ಅನ್ನು ನಿಷೇಧಿಸಲು ಸಾಕಷ್ಟು ವಿಶ್ವಾಸಾರ್ಹ ಪುರಾವೆಗಳಿವೆ ಎಂದು ನಂಬುತ್ತೇವೆ ಎಂದು ಅವರು ಹೇಳಿದರು.

ದೇಶವಿರೋಧಿ ಚಟುವಟಿಕೆಗಳಿಂದಾಗಿ ಪಿಟಿಐ ಸಂಘಟನೆಯನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಇಮ್ರಾನ್ ಖಾನ್ ತಮ್ಮ ರಾಜಕೀಯ ಆಸೆಗಳಿಗಾಗಿ ದೇಶದ ರಾಜತಾಂತ್ರಿಕ ಸಂಬಂಧಗಳನ್ನು ಹಾಳು ಮಾಡಲು ಪ್ರಯತ್ನಿಸಿದರು. ಅವರ ವಿರುದ್ಧ ವಿದೇಶಿ ಹಣದ ಪ್ರಕರಣವಿದೆ, ಮೇ 9ರ ಗಲಭೆ ಪ್ರಕರಣವು ಅವರ ವಿರುದ್ಧ ಸಾಬೀತಾಗಿದೆ. ಇನ್ನೂ ಹಲವು ಪ್ರಕರಣಗಳಲ್ಲಿ ಆತ ತಪ್ಪಿತಸ್ಥ. ಈ ಎಲ್ಲ ಸಾಕ್ಷ್ಯಗಳನ್ನು ಇಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅತ್ತಾವುಲ್ಲಾ ತರಾರ್ ತಿಳಿಸಿದರು.

ಪಿಟಿಐ ನಿಷೇಧದ ಜತೆಗೆ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಮಾಜಿ ಡೆಪ್ಯೂಟಿ ಚೇರ್ಮನ್ ಖಾಸಿಂ ಸೂರಿ ವಿರುದ್ಧವೂ ಆರ್ಟಿಕಲ್ 6 ಅನ್ನು ಜಾರಿಗೊಳಿಸುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ. ಈ ಕಲಂ 6ರ ಅಡಿಯಲ್ಲಿ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಮೀಸಲು ಸೀಟುಗಳ ವಿಷಯದಲ್ಲಿ ಪಿಟಿಐಗೆ ಸುಪ್ರೀಂಕೋರ್ಟ್ ರಿಲೀಫ್ ನೀಡಿದ ನಂತರ ಪಾಕಿಸ್ತಾನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಪಾಕಿಸ್ತಾನ್ ತೆಹ್ರೀಕ್​​-ಇ-ಇನ್ಸಾಫ್(ಪಿಟಿಐ) ಪಾಕಿಸ್ತಾನದಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದು ಇದನ್ನು 1996ರಲ್ಲಿ ಇಮ್ರಾನ್ ಖಾನ್ ಸ್ಥಾಪಿಸಿದರು. ಅಂದಿನಿಂದ ಇದು ಪಾಕಿಸ್ತಾನದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದೆ. ಇಮ್ರಾನ್ ಖಾನ್ ಅವರ ಪಕ್ಷವು 2018ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿತು ಆದರೆ 2022ರ ಏಪ್ರಿಲ್‌ನಲ್ಲಿ ವಿಶ್ವಾಸಮತ ಪಡೆಯುವಲ್ಲಿ ಸೋಲನ್ನು ಅನುಭವಿಸಿತು.(ಏಜೆನ್ಸೀಸ್​​)