ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಸಂಘರ್ಷದಲ್ಲಿ (Border Conflict) ಕನಿಷ್ಠ 15 ಅಫ್ಘಾನ್ ನಾಗರಿಕರು ಮತ್ತು 6 ಪಾಕ್ ಅರೆಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಬುಧವಾರ (ಅಕ್ಟೋಬರ್,15) ವರದಿಗಳು ತಿಳಿಸಿವೆ.
ಅಫ್ಘಾನ್ ಗಡಿಯ ಬಳಿ ಉಗ್ರರೊಂದಿಗಿನ ಘರ್ಷಣೆಯಲ್ಲಿ ಕನಿಷ್ಠ 6 ಪಾಕಿಸ್ತಾನಿ ಅರೆಸೈನಿಕ ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅಲ್ಲದೆ, ಎರಡೂ ದೇಶಗಳ ಗಡಿಯಲ್ಲಿ ನಡೆದ ಹೊಸ ಹಿಂಸಾಚಾರದಲ್ಲಿ 15 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 12 ಕ್ಕೂ ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ದಾಳಿಯ ಬಗ್ಗೆ ಮಾಹಿತಿ ನೀಡಿರುವ ಪಾಕ್, ಮಂಗಳವಾರ ರಾತ್ರಿ ಅಫ್ಘಾನ್ ಪಡೆಗಳು ಮತ್ತು ಸ್ಥಳೀಯ ಉಗ್ರಗಾಮಿಗಳು ನಡೆಸಿದ ಗಡಿಯಾಚೆಗಿನ ಗುಂಡಿನ ದಾಳಿಗೆ ತನ್ನ ಸೇನೆಯು ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದೆ.
ಕಾಬೂಲ್ ಮೇಲೆ ನೆಡಸಿದ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಅಫ್ಘಾನ್ ಆರೋಪಿಸಿದೆ. ಅಲ್ಲದೆ, ಅಫ್ಘಾನಿಸ್ತಾನವು ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳುವ ದಾಳಿ ನಡೆಸಿದ ನಂತರ ಕಳೆದ ವಾರಾಂತ್ಯದಲ್ಲಿ ಎರಡೂ ದೇಶಗಳ ನಡುವೆ ಘರ್ಷಣೆ ನಡೆದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ.
ವಾಯುವ್ಯ ಕುರ್ರಮ್ ಪ್ರದೇಶದಲ್ಲಿ ಅಪ್ರಚೋದಿತ ಗುಂಡಿನ ದಾಳಿಗೆ ಪಾಕಿಸ್ತಾನವು ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸಿದೆ ಎಂದು ಪಾಕ್ಹೇಳಿದೆ. ಇದರಲ್ಲಿ ಅನೇಕ ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಮತ್ತು ಅವರ ಮುಂಚೂಣಿಯ ಪೋಸ್ಟ್‌ಗಳು ಮತ್ತು ಟ್ಯಾಂಕ್‌ಗೆ ಹಾನಿಯಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಅಕ್ಟೋಬರ್ 7 ರ ರಾತ್ರಿ ಕಾಬೂಲ್ ಮೇಲೆ ಪಾಕಿಸ್ತಾನಿ ಸೇನೆ ನಡೆಸಿದ ವಾಯುದಾಳಿಗೆ ಪ್ರತೀಕಾರ ಎಂದು ಕರೆದ ಅಫ್ಘಾನಿಸ್ತಾನ ಶನಿವಾರ ತಡರಾತ್ರಿ ತಮ್ಮ ಹಂಚಿಕೆಯ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ನಡೆಸಿತು.
ಅಫ್ಘಾನಿಸ್ತಾನ ತನ್ನ ದಾಳಿಯಲ್ಲಿ 58 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡರೆ, ಪಾಕಿಸ್ತಾನವು 23 ಜನರ ಸಾವುನೋವು ಸಂಭವಿಸಿದೆ ಎಂದು ಹೇಳಿಕೊಂಡಿತ್ತು. ಈ ಪ್ರತಿದಾಳಿಯಲ್ಲಿ 200 ಕ್ಕೂ ಹೆಚ್ಚು ತಾಲಿಬಾನ್ ಮತ್ತು ಸಂಯೋಜಿತ ಸೈನಿಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಪಾಕ್ ಹೇಳಿದೆ. ಅಲ್ಲದೆ ಈ ಸಂಘರ್ಷದಿಂದ ಅಕ್ಟೋಬರ್ 12 ರ ಭಾನುವಾರದಂದು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಗಡಿಯನ್ನು ಮುಚ್ಚಲಾಗಿದೆ.
ಈ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡುವುದಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಜ್ಞೆ ಮಾಡಿದ ಕೆಲವೇ ಗಂಟೆಗಳ ನಂತರ, ತಾಲಿಬಾನ್ ಪಾಕಿಸ್ತಾನ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ಬಯಸದಿದ್ದರೆ ಪರಿಸ್ಥಿತಿಯನ್ನು ನಿಭಾಯಿಸಲು ಬೇರೆ ಮಾರ್ಗಗಳಿವೆ ಎಂದು ಅಫ್ಘಾನ್ ಎಚ್ಚರಿಕೆ ನೀಡಿದೆ.
ಅಲ್ಲದೆ ಈ ಸಂಘರ್ಷದಲ್ಲಿ ಸ್ಪಿನ್ ಬೋಲ್ಡಕ್ ಪ್ರದೇಶದ ಸ್ಥಳೀಯ ಮಾಹಿತಿ ಇಲಾಖೆಯ ವಕ್ತಾರ ಅಲಿ ಮೊಹಮ್ಮದ್ ಹಕ್ಮಲ್, ಹೊಸ ಘರ್ಷಣೆಗಳಲ್ಲಿ 15 ನಾಗರಿಕರು ಮೋರ್ಟರ್ ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
80 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ ಎಂದು ಸ್ಪಿನ್ ಬೋಲ್ಡಕ್ ಜಿಲ್ಲಾ ಆಸ್ಪತ್ರೆಯ ಅಧಿಕಾರಿ ಅಬ್ದುಲ್ ಜಾನ್ ಬರಾಕ್ ಅವರು ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್)