ನ್ಯೂಸ್

1 ಟೊಮ್ಯಾಟೋ ಬೆಲೆ 75 ರೂಪಾಯಿ: ಖರೀದಿಗೆ ಸಾಲ ಕೊಡಿ ಎನ್ನುತ್ತಾ ಭಾರತವನ್ನು ನೆನೆದ ಪಾಕ್​ ಸಂಸದ! Tomato

ಇಸ್ಲಮಾಬಾದ್​: ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಹಣದುಬ್ಬರವು ಅಲ್ಲಿನ ನಾಗರಿಕರಲ್ಲಿ ತೀವ್ರ ಕಳವಳವನ್ನು ಉಂಟುಮಾಡಿದೆ. ಅಗತ್ಯ ವಸ್ತುಗಳ ಬೆಲೆಗಳು ಕೈಗೆಟುಕದಂತೆ ಗಮನಾರ್ಹ ಏರಿಕೆ ಕಂಡಿದೆ. ಟೊಮ್ಯಾಟೋ ( Tomato ) ಬೆಲೆ ಪ್ರತಿ ಕೆಜಿಗೆ 600 ರೂಪಾಯಿ ತಲುಪಿದೆ. ಶೇ. 400% ಬೆಲೆ ಹೆಚ್ಚಾಗಿದೆ. ಹೀಗಾಗಿ ಪಾಕ್​ ಜನರ ಪರಿಸ್ಥಿತಿಗಳು ಹೇಳತೀರದ್ದಾಗಿದೆ.

ಟೊಮ್ಯಾಟೋ ಬೆಲೆ ಏರಿಕೆ ವಿಚಾರ ಇತ್ತೀಚೆಗೆ, ಪಾಕಿಸ್ತಾನ ಸಂಸತ್ತಿನಲ್ಲಿ ಗದ್ದಲಕ್ಕೆ ಕಾರಣವಾಯಿತು. ಟೊಮ್ಯಾಟೋ ಖರೀದಿಸಲು ಸಾಲ ತೆಗೆದುಕೊಳ್ಳಬೇಕಾಯಿತು ಎಂದು ಸಂಸದರೊಬ್ಬರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಅಲ್ಲದೆ, ಟೊಮ್ಯಾಟೋ ಖರೀದಿಗೆ ಸಾಲ ನೀಡುವಂತೆ ಸಂಸತ್ತಿನಲ್ಲಿ ಒತ್ತಾಯಿಸಿದರು. ಈ ಹಿಂದೆ ಭಾರತದಿಂದ ಕಡಿಮೆ ಬೆಲೆಗೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದಿನಗಳನ್ನು ಪಾಕ್​ ಸಂಸದ ಇದೇ ಸಂದರ್ಭದಲ್ಲಿ ನೆನಪಿಸಿಕೊಂಡರು.

ಸಂಸತ್ತಿನ ಕಲಾಪದ ವೇಳೆ ಪಾಕಿಸ್ತಾನಿ ಸಂಸದರೊಬ್ಬರು ಟೊಮ್ಯಾಟೋವನ್ನು ಜೇಬಿನಲ್ಲಿಟ್ಟುಕೊಂಡು ಬಂದಿದ್ದರು. ಆ ಟೊಮ್ಯಾಟೋವನ್ನು ತೆಗೆದುಕೊಂಡ ಮತ್ತೊಬ್ಬ ಸಂಸದ, ಈ ಟೊಮ್ಯಾಟೋವನ್ನು ಇಲ್ಲಿಗೆ ತರಲು ತುಂಬಾ ಕಷ್ಟವಾಯಿತು. ಈ ಟೊಮ್ಯಾಟೋವನ್ನು ತೆಗೆದುಕೊಂಡ ಬಂದ ನನ್ನ ಸಹೋದ್ಯೋಗಿ ಫಾರೂಕ್​ ಸಾಹಿಬ್​ ಅವರಿಗೆ ಧನ್ಯವಾದಗಳು. ಈ ಒಂದು ಟೊಮ್ಯಾಟೋ ಬೆಲೆ ಇದೀಗ 75 ರೂಪಾಯಿ ಎಂದು ಸಂಸದರು ಸಂಸತ್ತಿನಲ್ಲಿ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್​ ಆಗುತ್ತಿದೆ.

ಅಂದಹಾಗೆ, ಅಕ್ಟೋಬರ್ 11 ರಿಂದ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಭಾರೀ ಘರ್ಷಣೆಗಳು ನಡೆಯುತ್ತಿವೆ. ಪಾಕಿಸ್ತಾನದ ವಾಯುದಾಳಿಯಿಂದಾಗಿ ಉಭಯ ದೇಶಗಳ ಗಡಿಯನ್ನು ಮುಚ್ಚಲಾಗಿದೆ. ಇದರ ಪರಿಣಾಮವಾಗಿ ಸುಮಾರು 2,600 ಕಿಮೀ ಗಡಿಯಲ್ಲಿ ವ್ಯಾಪಾರ ಸ್ತಬ್ಧವಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಪಾಕ್-ಅಫ್ಘಾನ್ ವಾಣಿಜ್ಯ ಮಂಡಳಿಯ ಮುಖ್ಯಸ್ಥ ಖಾನ್ ಜಾನ್ ಅಲೋಕೋಜೈ ಪ್ರಕಾರ, ವ್ಯಾಪಾರ ಸ್ತಬ್ಧವಾಗಿರುವುದರಿಂದ ಉಭಯ ದೇಶಗಳು ಪ್ರತಿದಿನ ಸುಮಾರು 1 ಮಿಲಿಯನ್ ಡಾಲರ್ ನಷ್ಟವನ್ನು ಅನುಭವಿಸುತ್ತಿವೆ. ಇದರಲ್ಲಿ ತಾಜಾ ಹಣ್ಣುಗಳು, ತರಕಾರಿಗಳು, ಖನಿಜಗಳು, ಔಷಧಿಗಳು, ಗೋಧಿ, ಅಕ್ಕಿ, ಸಕ್ಕರೆ, ಮಾಂಸ ಮತ್ತು ಡೈರಿ ಉತ್ಪನ್ನಗಳು ಸೇರಿವೆ. ಪರಿಣಾಮವಾಗಿ, ಪಾಕಿಸ್ತಾನದಲ್ಲಿ ಬೆಲೆಗಳು ಗಗನಕ್ಕೇರಿವೆ.

ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನ ವರದಿಯ ಪ್ರಕಾರ, ಬೆಳ್ಳುಳ್ಳಿ ಈಗ ಕೆಜಿಗೆ 400 ರೂ., ಶುಂಠಿ 750 ರೂ., ಈರುಳ್ಳಿ 120 ರೂ., ಬಟಾಣಿ 500 ರೂ., ಕ್ಯಾಪ್ಸಿಕಂ ಮತ್ತು ಬೆಂಡೆಕಾಯಿ 300 ರೂ., ಸೌತೆಕಾಯಿ 150 ರೂ., ಸ್ಥಳೀಯ ಕ್ಯಾರೆಟ್ 200 ರೂ. ಮತ್ತು ನಿಂಬೆಹಣ್ಣು 300 ರೂ. ಹೆಚ್ಚಾಗಿದೆ. (ಏಜೆನ್ಸೀಸ್​)