ನವದೆಹಲಿ: ಪಾಕಿಸ್ತಾನದ ಸಂಸತ್ ಸದಸ್ಯ ಮೊಹಮ್ಮದ್ ಅಲಿ ಸೈಫ್ ವಿರುದ್ಧ ನೆಟ್ಟಿಗರು ಹಾಗೂ ಮಾನವಹಕ್ಕುಗಳ ಹೋರಾಟಗಾರರು ಸಿಟ್ಟಿಗೆದ್ದಿದ್ದಾರೆ. ಭಾರತದ ಕಾಶ್ಮೀರದಲ್ಲಿ ಮತ್ತು ಅಫ್ಘಾನಿಸ್ತಾನದಲ್ಲಿ ಜಿಹಾದ್ ಮಾಡಿದರೆ ಪಾಕ್ ಸೇನೆಯ ಬೆಂಬಲ ಸಿಗುತ್ತದೆ ಎಂಬರ್ಥದಲ್ಲಿ ಅವರು ಪಾಕಿಸ್ತಾನದ ಸಂಸತ್ನಲ್ಲಿ ನೀಡಿರುವ ಹೇಳಿಕೆ ಇದಕ್ಕೆ ಕಾರಣವಾಗಿದೆ.
ಸಂಸತ್ನಲ್ಲಿ ಅವರು ಮಾಡಿದ್ದಾರೆ ಎಂದು ಹೇಳಲಾದ ಭಾಷಣದ ತುಣುಕು ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಭಾರಿ ಟ್ರೆಂಡಿಂಗ್ನಲ್ಲಿದ್ದು, ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಅಲ್ಲಾಹು ಮತ್ತು ಪ್ರವಾದಿ ಮೊಹಮ್ಮದ್ ಅವರಿಗಾಗಿ ದಯವಿಟ್ಟು ಇತಿಹಾಸವನ್ನು ಓದಿ. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಅಲ್ಲಿ ಜಿಹಾದ್ ಘೋಷಿಸಿ. ಪಾಕಿಸ್ತಾನ ಸೇನೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಅಫ್ಘಾನಿಸ್ತಾನದಲ್ಲಿ ಜಿಹಾದ್ ಘೋಷಿಸಿ, ನಿಮ್ಮನ್ನು ತಡೆಯುವವರು ಯಾರೂ ಇಲ್ಲ. ಅಫ್ಘಾನಿಸ್ತಾನದಲ್ಲಿ ಗನ್ಗಳನ್ನು ಹಿಡಿಯಿರಿ, ಪಾಕಿಸ್ತಾನ ಸೇನೆ ನಿಮ್ಮ ನೆರವಿಗೆ ಮುಂದಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
ಸೈಫ್ ಅವರ ಈ ಹೇಳಿಕೆಯ ವಿರುದ್ಧ ಬಹಿರಂಗವಾಗಿ ಟೀಕೆ ವ್ಯಕ್ತಪಡಿಸಿರುವ ಪಾಕ್ ಮುಖಂಡ ಅಲಿ ವಜೀರ್, ಬ್ಯಾರಿಸ್ಟರ್ ಸೈಫ್ ಅವರು ಪಾಕ್ನ ಸಂಸತ್ನಲ್ಲಿ ನೀಡಿರುವ ಪಾಕಿಸ್ತಾನದ ಉಗ್ರವಾದಿಗಳು ಕಾಶ್ಮೀರ ಮತ್ತು ಅಫ್ಘಾನಿಸ್ತಾನಕ್ಕೆ ತೆರಳಿ ಹೋರಾಡಿದರೆ ಪಾಕ್ ಸೇನೆ ಬೆಂಬಲಿಸುತ್ತದೆ ಎಂಬ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಮಾನವಹಕ್ಕುಗಳ ಹೋರಾಟಗಾರ ಗುಲಾಲೈ ಇಸ್ಮಾಯಿಲ್, ರಂಜಾನ್ನ ಪವಿತ್ರ ಮಾಸದಲ್ಲಿ ಜಿಹಾದಿ ಭಯೋತ್ಪಾದನಾ ಸಂಘಟನೆಗಳಿಗಾಗಿ ಭಾರಿ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಲಾಯಿತು. ಇದೀಗ ಸೈಪ್ ಅವರು ಕಾಶ್ಮೀರ ಮತ್ತು ಅಫ್ಘಾನಿಸ್ತಾನದಲ್ಲಿ ಜಿಹಾದ್ಗೆ ಕರೆ ನೀಡಿದ್ದಾರೆ. ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಬುದ್ಧಿಮಾತು ಹೇಳುವವರು ಯಾರಾದರೂ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ.
ನೆಟ್ಟಿಗರು ಕೂಡ ಸೈಫ್ ಅವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದು, ಜಗತ್ತಿನ ಮುಖಂಡರೇ, ಇನ್ನು ಎಷ್ಟು ದಿನ ಅಫ್ಘಾನಿಸ್ತಾನದಲ್ಲಿ ರಕ್ತಪಾತ ನೋಡಲು ಬಯಸುತ್ತೀರಾ, ಮೊದಲ ಅದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.