Cease Fire: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಒಪ್ಪಂದಕ್ಕೆ ತಕ್ಕಂತೆ ಸುಮ್ಮನಿದ್ದ ಭಾರತವನ್ನು ಮತ್ತೆ ತನ್ನ ನರಿ ಬುದ್ಧಿಯಿಂದ ಪಾಕ್ ಕೆಣಕಿದೆ. ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ, ಜಮ್ಮು-ಕಾಶ್ಮೀರದಲ್ಲಿ ಡ್ರೋನ್ ಮತ್ತು ಗುಂಡಿನ ದಾಳಿ ನಡೆಸಿತು. ಇದು ಭಾರತವನ್ನು ಮತ್ತಷ್ಟು ಕೆರಳಿಸಿದ್ದು, ಕದನ ವಿರಾಮಕ್ಕೆ ಬಗ್ಗದ ಹೋದರೆ ಯುದ್ಧಕ್ಕೂ ನಾವು ಸಿದ್ಧ ಎಂಬ ಮಾತನ್ನು ಎಚ್ಚರಿಕೆಯಾಗಿ ರವಾನಿಸಿದೆ. ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಭಾರತದೊಂದಿಗೆ ಕದನ ವಿರಾಮಕ್ಕೆ ಸಹಾಯ ಹಸ್ತ ನೀಡಿದ ಟ್ರಂಪ್ ಸರ್ಕಾರಕ್ಕೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಧನ್ಯವಾದ ತಿಳಿಸಿದ್ದಾರೆ.
ಭಾರತದೊಂದಿಗೆ ಕದನ ವಿರಾಮವನ್ನು ಸುಗಮಗೊಳಿಸಿದ್ದಕ್ಕಾಗಿ ಪ್ರಧಾನಿ ಷರೀಫ್ ಅಮೆರಿಕಕ್ಕೆ ಧನ್ಯವಾದ ತಿಳಿಸಿದ್ದಾರೆ. ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಶ್ಲಾಘಿಸಿ, ಧನ್ಯವಾದ ತಿಳಿಸಿದರು. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ ಷರೀಫ್, ಈ ಪ್ರದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದು ಹೊಸ ಆರಂಭ ಎಂದು ಹೇಳಿದ್ದಾರೆ.
""ಪಾಕಿಸ್ತಾನ ಶಾಂತಿಪ್ರಿಯ ದೇಶ, ಅದು ಶಾಂತಿಯನ್ನು ಬಯಸುತ್ತದೆ. ಇದರೊಟ್ಟಿಗೆ ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಸಹ ತಿಳಿದಿದೆ. ಟ್ರಂಪ್ ಅವರ ನಾಯಕತ್ವ ಮತ್ತು ಎರಡೂ ದೇಶಗಳ ನಡುವೆ ಶಾಂತಿಯನ್ನು ಉತ್ತೇಜಿಸುವಲ್ಲಿ ತೋರಿದ ಸಕ್ರಿಯ ಪಾತ್ರಕ್ಕಾಗಿ ನಾವು ಧನ್ಯವಾದಗಳನ್ನು ತಿಳಿಸುತ್ತೇವೆ. ಯುದ್ಧ ತಪ್ಪಿಸುವಲ್ಲಿ ತೋರಿದ ನಡೆಗೆ ಪಾಕಿಸ್ತಾನ ಅಮೆರಿಕವನ್ನು ಶ್ಲಾಘಿಸುತ್ತದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ನಾವು ಒಪ್ಪಿಕೊಂಡಿದ್ದೇವೆ" ಎಂದು ತಮ್ಮ ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ತುಕ್ಕು ಹಿಡಿದ ಟ್ಯಾಂಕರ್ಗಳಲ್ಲಿ ಕಾವೇರಿ ನೀರು ಪೂರೈಕೆ: ಬಿಜೆಪಿ ಟೀಕೆ | Scam in water supply scheme
ಭಾರತ ಮತ್ತು ಪಾಕಿಸ್ತಾನ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಘೋಷಿಸಿದ ಬೆನ್ನಲ್ಲೇ ಪಾಕ್ ಪ್ರಧಾನಿ ಹೇಳಿಕೆಗಳು ಹೊರಬಿದ್ದಿವೆ. "ಪಾಕಿಸ್ತಾನವು ಶಾಂತಿಗಾಗಿ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸುತ್ತದೆ ಮತ್ತು ಯುದ್ಧ, ಹಿಂಸೆ ಮತ್ತು ಆಕ್ರಮಣಶೀಲತೆ ಎಂದಿಗೂ ಉತ್ತರವಲ್ಲ" ಎಂದು ಮಾಜಿ ವಿದೇಶಾಂಗ ಸಚಿವ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.
"ಭಾರತ ಮತ್ತು ಪಾಕಿಸ್ತಾನ ಎರಡೂ ಕದನ ವಿರಾಮ ಮತ್ತು ಮಾತುಕತೆಗೆ ಒಪ್ಪಿಕೊಂಡಿವೆ. ಇದನ್ನು ರಾಜತಾಂತ್ರಿಕ ವಿಜಯವೆಂದು ನಾವು ಸ್ವಾಗತಿಸುತ್ತೇವೆ ಮತ್ತು ಈ ಐತಿಹಾಸಿಕ ಮೈಲಿಗಲ್ಲು ಸಾಧಿಸುವಲ್ಲಿ ಅಮೆರಿಕ ಹಾಗೂ ಸೌದಿ ಅರೇಬಿಯಾ ಸೇರಿದಂತೆ ಎಲ್ಲಾ ದೇಶಗಳ ಪಾತ್ರವನ್ನು ಪ್ರಶಂಸಿಸುತ್ತೇವೆ" ಎಂದು ಹೇಳಿದರು,(ಏಜೆನ್ಸೀಸ್).