Pahalgam Terror Attack : ಪ್ರವಾಸಿಗರ ಸ್ವರ್ಗ ಕಾಶ್ಮೀರದ ಪ್ರಸಿದ್ಧ ಗಿರಿಧಾಮ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆಸಿ, 26 ಪ್ರವಾಸಿಗರನ್ನು ಭೀಕರವಾಗಿ ಕೊಂದ ಶಂಕಿತ ಭಯೋತ್ಪಾದಕರ ಫೋಟೋ ಮತ್ತು ರೇಖಾಚಿತ್ರಗಳನ್ನು ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿವೆ ಎಂದು ಇಂಡಿಯಾ ಟುಡೆ ಇಂದು (ಏಪ್ರಿಲ್ 23) ವರದಿ ಮಾಡಿದೆ.
ಫೋಟೋದಲ್ಲಿರುವ ನಾಲ್ವರು ಭಯೋತ್ಪಾದಕರಲ್ಲಿ ಮೂವರನ್ನು ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ. ಇವರೆಲ್ಲರೂ ನಿಷೇಧಿತ ಲಷ್ಕರ್-ಎ-ತೊಯ್ಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದಾಗಿ ತಿಳಿದುಬಂದಿದೆ. ಈ ದುರಂತವನ್ನು ನಿಭಾಯಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತ ಭದ್ರತಾ ಸಂಸ್ಥೆಗಳು ಕೂಡ ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ದಾಳಿಯ ಹಿಂದಿನ ಕ್ರೂರ ಸಂಚನ್ನು ಬಯಲು ಮಾಡಲು ಸರ್ವ ಪ್ರಯತ್ನಗಳನ್ನು ಮಾಡುತ್ತಿವೆ.
ಕನಿಷ್ಠ 5 ರಿಂದ 6 ಭಯೋತ್ಪಾದಕರು, ತಮ್ಮ ಗುರುತನ್ನು ಮರೆಮಾಚುವ ಉಡುಪುಗಳು ಮತ್ತು ಕುರ್ತಾ-ಪೈಜಾಮಾಗಳನ್ನು ಧರಿಸಿ, ಕಣಿವೆಯ ಸುತ್ತಲಿನ ದಟ್ಟವಾದ ಪೈನ್ ಕಾಡಿನಿಂದ ಬೈಸರನ್ ಹುಲ್ಲುಗಾವಲಿಗೆ ಬಂದು AK-47 ಗಳೊಂದಿಗೆ ಗುಂಡು ಹಾರಿಸಿದ್ದಾರೆ. ಕೆಲವೇ ದಿನಗಳ ಮೊದಲು ಕಣಿವೆಗೆ ನುಸುಳಿದ ಪಾಕಿಸ್ತಾನಿ ಭಯೋತ್ಪಾದಕರು ಈ ಗುಂಪಿನಲ್ಲಿ ಸೇರಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಎಲ್‌ಇಟಿಯ ಉನ್ನತ ಕಮಾಂಡರ್ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಈ ಹತ್ಯಾಕಾಂಡದ ಮಾಸ್ಟರ್ ಮೈಂಡ್ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ. ಭದ್ರತಾ ಪಡೆಗಳು ಬೃಹತ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಅರಣ್ಯ ಪ್ರದೇಶವನ್ನು ಬಳಸಿಕೊಂಡು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಭಯೋತ್ಪಾದಕರನ್ನು ಪತ್ತೆಹಚ್ಚಲು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿವೆ. ಪ್ರಾಥಮಿಕ ವಿಧಿವಿಜ್ಞಾನ ವಿಶ್ಲೇಷಣೆ ಮತ್ತು ಗೂಢಚಾರರ ಸಾಕ್ಷ್ಯಗಳ ಪ್ರಕಾರ, ಭಯೋತ್ಪಾದಕರು ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಸಂವಹನ ಸಾಧನಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಉಗ್ರರ ನಡೆಸಿದ ಗುಂಡಿನ ದಾಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಉಗ್ರರು ತೆರೆದ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದಂತೆ ಅಲ್ಲಿದ್ದ ಪ್ರವಾಸಿಗರು ಚೆಲ್ಲಾಪಿಲ್ಲಿಯಾಗಿ ಓಡಾಡುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿವೆ.
ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಅಂಗಸಂಸ್ಥೆಯಾಗಿರುವ ರೆಸಿಸ್ಟೆನ್ಸ್ ಫ್ರಂಟ್ ನಿನ್ನೆಯ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದಾಳಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕಾಶ್ಮೀರಕ್ಕೆ ಧಾವಿಸಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಇಂದು ಬೆಳಗ್ಗೆ ವಾಪಸ್ ಭಾರತಕ್ಕೆ ಬಂದಿದ್ದು, ಸಾಲು ಸಾಲು ಸಭೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೂ ಮೊದಲು, ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ, ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಈ ಹೇಯ ಕೃತ್ಯದ ಹಿಂದಿರುವವರನ್ನು ಸುಮ್ಮನೇ ಬಿಡುವುದಿಲ್ಲ ಮತ್ತು ಅವರ ದುಷ್ಟ ಕಾರ್ಯಸೂಚಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಮತ್ತು ಅದು ಇನ್ನಷ್ಟು ಬಲಗೊಳ್ಳುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಮೃತರ ಶವಗಳನ್ನು ಮನೆಗೆ ತರುವ ಮೊದಲು ಗೃಹ ಸಚಿವ ಅಮಿತ್ ಷಾ ಇಂದು ಗೌರವ ನಮನ ಸಲ್ಲಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಭಾರವಾದ ಹೃದಯದಿಂದ ಅಂತಿಮ ನಮನ ಸಲ್ಲಿಸಿದರು. ಭಾರತ ಭಯೋತ್ಪಾದನೆಗೆ ಬಗ್ಗುವುದಿಲ್ಲ. ಈ ಭೀಕರ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಅಮಿತ್ ಷಾ ಗುಡುಗಿದ್ದಾರೆ.
ನಿನ್ನೆ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಕಾಶ್ಮೀರದ ಸೌಂದರ್ಯವನ್ನು ನೋಡಲು ಬಂದಿದ್ದ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ಇಸ್ರೇಲ್ ಮತ್ತು ಇಟಲಿಯ ತಲಾ ಒಬ್ಬರು, ಇಬ್ಬರು ಸ್ಥಳೀಯರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 28 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ವಹಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸುವಾಗ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಪ್ರವಾಸಿಗರನ್ನು ಸುತ್ತುವರೆದ ಭಯೋತ್ಪಾದಕರು ಮನಬಂದಂತೆ ಗುಂಡು ಹಾರಿಸಿದರು. ಕೆಲವು ಭಯೋತ್ಪಾದಕರು, ಹೆಸರುಗಳನ್ನು ಕೇಳುತ್ತಾ ಮತ್ತು ಗುರುತಿನ ಚೀಟಿಗಳನ್ನು ನೋಡುತ್ತಾ, ಹಿಂದೂಗಳನ್ನು ಗುಂಡು ಹಾರಿಸಿ ಕೊಂದರು. ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತದೆ. ಇಡೀ ಜಗತ್ತು ಈ ಘಟನೆಯನ್ನು ಖಂಡಿಸುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರನ್ನು ನಿರ್ಮೂಲನೆ ಮಾಡದೇ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)