ನ್ಯೂಸ್

ಪಹಲ್ಗಾಮ್ ದಾಳಿ; ಒಬ್ಬ ಭಯೋತ್ಪಾದಕನನ್ನೂ ಬಿಡುವುದಿಲ್ಲ; ಅಮಿತ್ ಶಾ ಎಚ್ಚರಿಕೆ ಸಂದೇಶ| Amith shah

Amith shah | ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು "ಯುದ್ಧ ಗೆದ್ದಿದ್ದೇವೆ" ಎಂದು ಭಾವಿಸಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಪಹಲ್ಗಾಮ್‌ನಲ್ಲಿ ನಾಗರಿಕರನ್ನು ಕೊಂದ ಪ್ರತಿಯೊಬ್ಬ ಭಯೋತ್ಪಾದಕನನ್ನು ಹುಡುಕಿ ಶಿಕ್ಷಿಸಲಾಗುವುದು, ಮತ್ತು ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ತಕ್ಕ ಉತ್ತರ ನೀಡುತ್ತದೆ ಎಂದು ಅಮಿತ್​ ಶಾ ಗುಡುಗಿದ್ದಾರೆ.

ಅಸ್ಸಾಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್​ ಶಾ, 90 ರ ದಶಕದಿಂದಲೂ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಡೆಸುತ್ತಿರುವವರ ವಿರುದ್ಧ ನಾವು ಬಲವಾಗಿ ಹೋರಾಡುತ್ತಿದ್ದೇವೆ, ಹೋರಾಟ ಇನ್ನೂ ಮುಗಿದಿಲ್ಲ. ಭಯೋತ್ಪಾದಕರು ನಮ್ಮ 27 ಜನರನ್ನು ಕೊಂದ ನಂತರ ಯುದ್ಧವನ್ನು ಗೆದ್ದಿದ್ದೇವೆ ಎಂದು ಭಾವಿಸಬಾರದು ಎಂದಿದ್ದಾರೆ.

ಹೇಡಿತನದ ದಾಳಿ ನಡೆಸುವುದು ಅವರ ದೊಡ್ಡ ಗೆಲುವು ಎಂದು ಯಾರಾದರೂ ಭಾವಿಸಿದರೆ, ಇದು ನರೇಂದ್ರ ಮೋದಿ ಸರ್ಕಾರ ಎಂದು ಅರ್ಥಮಾಡಿಕೊಳ್ಳಿ, ಯಾರನ್ನೂ ಬಿಡಲಾಗುವುದಿಲ್ಲ. ಈ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

(ಏಜೆನ್ಸೀಸ್)