ನ್ಯೂಸ್

ಪಹಲ್ಗಾಮ್ ದಾಳಿಯಲ್ಲಿ ಸ್ವದೇಶಿ ಉಗ್ರರು ಭಾಗಿಯಾಗಿರಬಹುದು ಎಂದ ಪಿ.ಚಿದಂಬರಂ! ಬಿಜೆಪಿ ಕಿಡಿ| P Chidambaram

P Chidambaram: ಸಂಸತ್​ನಲ್ಲಿ ಪಹಲ್ಗಾಮ್ ಉಗ್ರರ ದಾಳಿ, ಆಪರೇಷನ್ ಸಿಂಧೂರ ಬಗ್ಗೆ ಚರ್ಚೆಗೂ ಮುನ್ನವೇ ಕಾಂಗ್ರೆಸ್​ ಹಿರಿಯ ನಾಯಕ ಪಿ.ಚಿದಂಬರಂ ಸಂದರ್ಶನವೊಂದರಲ್ಲಿ ಪಹಲ್ಗಾಮ್​ ದಾಳಿಯಲ್ಲಿ ದೇಶಿಯ ಉಗ್ರರು ಭಾಗಿಯಾಗಿರಬಹುದು. ಪಾಕ್​ನಿಂದ ಉಗ್ರರು ಬಂದಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿರುವುದು ಭಾರಿ ರಾಜಕೀಯ ವಿವಾದಕ್ಕೆ ಕಿಡಿ ಹೊತ್ತಿಸಿದೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು ಆರೋಪಿಸಿದ್ದು, ಪಾಕ್ ವಿರುದ್ದ ಮಾತನಾಡಲು ಕಾಂಗ್ರೆಸ್ ಹಿಂಜರಿಯುತ್ತದೆ ಎಂದು ಕಿಡಿಕಾರಿದೆ.

ಸಂದರ್ಶನದಲ್ಲಿ ಪಿ.ಚಿದಂಬರಂ ಮಾತನಾಡಿದ್ದು ಏನು?

"ಉಗ್ರರ ದಾಳಿಯ ಬಳಿಕ ಎನ್‌ಐಎ ಮಾಡಿದ ಕೆಲಸವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಲು ಸಿದ್ಧವಿಲ್ಲ, ಅಧಿಕಾರಿಗಳು ಭಯೋತ್ಪಾದಕರನ್ನು ಗುರುತಿಸಿದ್ದಾರೆಯೇ? ಎಲ್ಲಿಂದ ಬಂದರು? ನನಗೆ ತಿಳಿದಿರುವಂತೆ, ಅವರು ಸ್ವದೇಶಿ ಭಯೋತ್ಪಾದಕರಾಗಿರಬಹುದು. ಪಾಕಿಸ್ತಾನದಿಂದ ಬಂದಿದ್ದಾರೆ ಅಂತ ನೀವು ಯಾಕೆ ಭಾವಿಸುತ್ತೀರಿ?  ಬಂದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ್ ಸಮಯದಲ್ಲಿ ನಮಗೆ ಆಗಿರುವ ಹಾನಿಯನ್ನ ಸರ್ಕಾರ ಸರ್ಕಾರ ಮರೆಮಾಚಿದೆ. ಯುದ್ಧದಲ್ಲಿ ಎರಡೂ ಕಡೆಗಳಲ್ಲಿ ನಷ್ಟಗಳು ಸಂಭವಿಸುತ್ತವೆ ಎಂದು ನಾನು ಒಂದು ಅಂಕಣದಲ್ಲಿ ಹೇಳಿದ್ದೆ. 2ನೇ ಮಹಾಯುದ್ಧದಲ್ಲಿ ವಿನ್‌ಸ್ಟನ್ ಚರ್ಚಿಲ್ ಪ್ರತಿದಿನ ಒಂದು ಹೇಳಿಕೆ ನೀಡುತ್ತಿದ್ದರು. ಏನೇ ನಷ್ಟಗಳಾಗಿದ್ರೂ ಬ್ರಿಟನ್ ಅದನ್ನು ಅನುಭವಿಸಿತು. ಆದರೆ, ಕೇಂದ್ರ ಸರ್ಕಾರ ನಷ್ಟಗಳನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತದೆ. ಯುದ್ಧದಲ್ಲಿ ನಷ್ಟಗಳು ಅನಿವಾರ್ಯ ಮತ್ತು ಸಹಜ. ನಷ್ಟಗಳನ್ನು ಒಪ್ಪಿಕೊಳ್ಳಿ. ಆಪರೇಷನ್ ಸಿಂಧೂರ್‌ ಎಲ್ಲಾ ಮರೆಮಾಚಬಹುದು ಎಂದುಕೊಂಡಿದ್ದಾರೆ, ಆದರೆ ಅದು ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಸಂಸತ್​ನಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಚರ್ಚೆ ಮಾಡಲು ಸರ್ಕಾರ ಯಾಕೆ  ಹಿಂಜರಿಯುತ್ತಿದೆ. ಹೇಗೆ? ಕದನ ವಿರಾಮ ಘೋಷಿಸಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದಿರುವುದಕ್ಕೆ ಚರ್ಚೆ ಮಾಡದಿರಬಹುದು ಎಂದು ಹೇಳಿದ್ದಾರೆ.

ಪಹಲ್ಗಾಮ್​ ದಾಳಿಯಲ್ಲಿ ಕುಟುಂಬ ಸದಸ್ಯರ ಮುಂದೆ 26 ಅಮಾಯಕರನ್ನು ನಿರ್ದಯವಾಗಿ ಕೊಂದ ಪಹಲ್ಗಾಮ್ ಹಂತಕರು ಪಾಕಿಸ್ತಾನಿ ಉಗ್ರರು ಎಂದು ಕೇಂದ್ರ ಮತ್ತು ಭದ್ರತಾ ಸಂಸ್ಥೆಗಳು ಸಮರ್ಥಿಸಿಕೊಂಡಿವೆ.

ಪಿ ಚಿದಂಬರಂ ಹೇಳಿಕೆಗೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್​​ನಲ್ಲಿ ಪ್ರತಿಕ್ರಿಯಿಸಿ, "ಯುಪಿಎ ಸರ್ಕಾರದ ಮಾಜಿ ಗೃಹ ಸಚಿವ ಮತ್ತು ಕುಖ್ಯಾತ 'ಕೇಸರಿ ಭಯೋತ್ಪಾದನೆ' ಸಿದ್ಧಾಂತದ ಪ್ರತಿಪಾದಕ ಪಿ ಚಿದಂಬರಂ ಮತ್ತೊಮ್ಮೆ ತಮ್ಮನ್ನು ತಾವು ವೈಭವದಿಂದ ಪ್ರಸ್ತುತಪಡಿಸಿಕೊಂಡಿದ್ದಾರೆ. ಉಗ್ರರ ದಾಳಿಯ ನಂತರ ಮತ್ತೊಮ್ಮೆ ಕಾಂಗ್ರೆಸ್ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಲು ಧಾವಿಸುತ್ತದೆ. ನಮ್ಮ ಪಡೆಗಳು ಪ್ರತಿ ಬಾರಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಎದುರಿಸುವಾಗ, ಕಾಂಗ್ರೆಸ್ ನಾಯಕರು ದೇಶಕ್ಕಿಂತ ಇಸ್ಲಾಮಾಬಾದ್‌ನ ರಕ್ಷಣಾ ವಕೀಲರಂತೆ ಯಾಕೆ ವರ್ತಿಸುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನ ಚರ್ಚೆಗೆ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ್ಲಾ ಆರೋಪಿಸಿದ್ದಾರೆ.

ಪಿ.ಚಿದಂಬರಂ ಹೇಳಿಕೆ ಬೆಂಬಲಿಸಿರುವ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, "ಕದನ ವಿರಾಮಕ್ಕೆ ಒಪ್ಪುವ ಮೂಲಕ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ್ದು ಕೇಂದ್ರ ಸರ್ಕಾರವೇ ಎಂದು ಹೇಳಿದರು. ಜಾಗತಿಕ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಮಟ್ಟಕ್ಕೆ ತಂದಿದ್ದೀರಿ. ಭಯೋತ್ಪಾದಕರು ಇನ್ನೂ ಜೀವಂತವಾಗಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಪಹಲ್ಗಾಮ್ ಹಂತಕರು ಜೀವಂತವಾಗಿದ್ದರೆ, ಪ್ರತಿಯೊಬ್ಬ ಭಾರತೀಯನೂ ನಾಚಿಕೆಪಡಬೇಕು" ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇಂದಿನಿಂದ ಸಂಸತ್​ನಲ್ಲಿ ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಬಗ್ಗೆ  ಚರ್ಚಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ವೇಳೆ ಪಿ.ಚಿದಂಬರಂ ಹೇಳಿಕೆ ಸಂಸತ್​ನಲ್ಲಿ ಪ್ರತಿಧ್ವನಿಸಬಹುದು. (ಏಜೆನ್ಸೀಸ್)