ನ್ಯೂಸ್

ಆಕ್ಸಿಜನ್ ಘಟಕಗಳ ಏದುಸಿರು: ಮೂರನೇ ಅಲೆ ಆತಂಕ; ನಿರೀಕ್ಷಿತ ವೇಗ ಪಡೆಯದ ಸ್ಥಾಪನೆ ಕಾರ್ಯ

| ಮೃತ್ಯುಂಜಯ ಕಪಗಲ್ ಬೆಂಗಳೂರು

ಆಕ್ಸಿಜನ್ ಕೊರತೆಯಿಂದ ಕರೊನಾ ರೋಗಿಗಳು ಮೃತಪಟ್ಟ ಪ್ರಕರಣದಿಂದ ಚಾಮರಾಜನಗರ ಜಿಲ್ಲಾ ಆಸ್ಪತ್ರೆ ರಾಷ್ಟ್ರದ ಗಮನಸೆಳೆದು, ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಅದೇ ಜಿಲ್ಲೆಯಲ್ಲಿ ಹೊಸ ಆಮ್ಲಜನಕ ಘಟಕಗಳ ಸ್ಥಾಪನೆ ಕಾಮಗಾರಿ ಏದುಸಿರು ಬಿಡುತ್ತಿರುವುದು ಬೆಳಕಿಗೆ ಬಂದಿದೆ. ಒಮಿಕ್ರಾನ್ ವೈರಾಣು ಹಾವಳಿ ಹೆಚ್ಚಿದೆ. ಮೂರನೇ ಅಲೆ ಪ್ರವೇಶಿಸುವುದಕ್ಕೆ ಹೊಂಚು ಹಾಕಿದೆ. ಆದರೂ ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಸರ್ಕಾರದ ಕ್ಷಿಪ್ರಗತಿ ಕ್ರಮ ಕಾಗದದಲ್ಲೇ ಉಳಿದಿದೆ.

ಎರಡನೇ ಅಲೆ ವೇಳೆ ಆಕ್ಸಿಜನ್ ಕೊರತೆಯಿಂದ ಉಂಟಾದ ಸಾವುಗಳಿಗೆ ಸರ್ಕಾರ ಬೆಚ್ಚಿಬಿದ್ದು, ಈ ಸಂಕಷ್ಟಕ್ಕೆ ಶಾಶ್ವತ ಪರಿಹಾರವಾಗಿ ಹೊಸ ಆಕ್ಸಿಜನ್ ಘಟಕಗಳ ಸ್ಥಾಪನೆಗೆ ನಿರ್ಧರಿಸಿತು. ಪ್ರತಿ ಜಿಲ್ಲೆಯು ಆಕ್ಸಿಜನ್ ಘಟಕ ಹೊಂದಬೇಕೆಂಬ ಉದ್ದೇಶದಿಂದ 262 ಘಟಕಗಳನ್ನು ಮಂಜೂರು ಮಾಡಿ, ಯುದ್ಧೋಪಾದಿಯಲ್ಲಿ ಸ್ಥಾಪನೆ ಕೆಲಸಕ್ಕೂ ಸೂಚಿಸಿತು. ಈ ಘಟಕಗಳ ಸ್ಥಾಪನೆಗೆ ಪಿಎಂ ಕೇರ್ಸ್, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್​ಆರ್) ನಿಧಿ ಜತೆಗೆ ಸ್ವಂತ ಸಂಪನ್ಮೂಲ (ರಾಜ್ಯ ಸರ್ಕಾರ) ಒದಗಿಸಲು ತೀರ್ವನಿಸಿತು.

190 ಘಟಕಗಳಿಗೆ ಚಾಲನೆ: ಪಿಎಂ ಕೇರ್ಸ್ ಅಡಿ 50 ಘಟಕಗಳು ಸೇರಿ 190 ಆಕ್ಸಿಜನ್ ಘಟಕಗಳು ಸ್ಥಾಪನೆಯಾಗಿದ್ದು, ಕಾರ್ಯಾರಂಭಿಸಿವೆ. ಒಟ್ಟು ಮಂಜೂರಾಗಿದ್ದ 262ರಲ್ಲಿ 72 ಘಟಕಗಳ ಕೆಲಸ ಮಂದಗತಿಯಲ್ಲಿದೆ. ಅಗತ್ಯ ಉಪಕರಣಗಳ ಪೂರೈಕೆ ವಿಳಂಬವೇ ಹಿನ್ನೆಡೆಗೆ ಕಾರಣವೆಂದು ಇಲಾಖೆ ಮೂಲಗಳು ತಿಳಿಸಿವೆ.

ನಿರೀಕ್ಷಿತ ವೇಗವಿಲ್ಲ: ಚಾಮರಾಜನಗರ ಜಿಲ್ಲೆಗೆ ಏಳು ಘಟಕಗಳನ್ನು ಮಂಜೂರು ಮಾಡಿದ್ದು, ಕೇವಲ ಘಟಕಗಳು ಚಾಲನೆ ಪಡೆದಿವೆಯಷ್ಟೆ. ಬೆರಳೆಣಿಕೆಯಷ್ಟು ಜಿಲ್ಲೆಗಳು ನಿಗದಿತ ಗುರಿ ತಲುಪಿದ್ದರೆ, ಉಳಿದೆಡೆ ನಿರೀಕ್ಷಿತ ವೇಗವಿಲ್ಲ ಎಂಬುದು ಆರೋಗ್ಯ ಇಲಾಖೆ ಅಧಿಕೃತ ಅಂಕಿ-ಅಂಶಗಳು ಸಾರುತ್ತವೆ. ಹೆಚ್ಚು ಸೋಂಕು ಪ್ರಕರಣಗಳು, ಆಕ್ಸಿಜನ್ ಕೊರತೆ, ಐಸಿಯುಗೆ ರೋಗಿಗಳು ದಾಖಲಾದ ಸಂಖ್ಯೆ, ತುರ್ತು ಚಿಕಿತ್ಸೆ ಸವಲತ್ತುಗಳ ಅಭಾವದ ಬದಲಿಗೆ ‘ಪ್ರಭಾವ’ ಹಾಗೂ ರಾಜಕೀಯವಾಗಿ ಬಲಾಢ್ಯತೆ ಆಧಾರದಲ್ಲಿ ಆಕ್ಸಿಜನ್ ಘಟಕಗಳನ್ನು ಮಂಜೂರು ಮಾಡಿರುವುದು ಬಹಿರಂಗವಾಗಿದೆ. ಉಡುಪಿ, ದಾವಣಗೆರೆ ತಲಾ 7, ಬೆಂಗಳೂರು ಗ್ರಾಮೀಣ-5 ಹಾಗೂ ಕೊಡಗು ಜಿಲ್ಲೆಗೆ ಮಂಜೂರಾದ ನಾಲ್ಕು ಘಟಕಗಳು ಕಾರ್ಯಾರಂಭಿಸಿದ್ದು, ಪೂರ್ಣ ಪ್ರಗತಿ ಸಾಧಿಸಿದ ಜಿಲ್ಲೆಗಳ ಪಟ್ಟಿಗೆ ಸೇರಿವೆ.

ಅನುಷ್ಠಾನ ನಿಧಾನ: ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಗೆ ಮಂಜೂರಾಗಿದ್ದ 9ರಲ್ಲಿ 6, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಂಜೂರು ಮಾಡಿದ್ದ 10ರಲ್ಲಿ ಆರು ಘಟಕಗಳು ಚಾಲನೆ ಪಡೆದಿವೆ. ಪಿಎಂ ಕೇರ್ಸ್ ಅಡಿ 50ಕ್ಕೆ 50 ಘಟಕಗಳು ಸ್ಥಾಪನೆಯಾಗಿವೆ. ಸಿಎಸ್​ಆರ್- 130ರಲ್ಲಿ 77, ರಾಜ್ಯ ಸರ್ಕಾರದ 40ರಲ್ಲಿ 29 ಘಟಕಗಳು ಕಾರ್ಯಗತವಾಗಿದ್ದು, 3ನೇ ಅಲೆ ಭೀತಿ ತಲೆದೋರಿದ್ದರೂ ಅನುಷ್ಠಾನ ನಿಧಾನ ಗತಿಯಲ್ಲಿದೆ.

15-18 ವರ್ಷದವರಿಗೆ ಇಂದಿನಿಂದ ಕರೊನಾ ಲಸಿಕೆ

ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಪ್ರಮುಖ ಘಟ್ಟವೆನಿಸಿದ ಲಸಿಕೆ ವಿತರಣೆ ಆರಂಭವಾಗಿ ಒಂದು ವರ್ಷ ಸಮೀಪಿಸಿದ್ದು, ಇದೀಗ 15ರಿಂದ 18 ವಯೋಮಾನದವರಿಗೆ ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ವಿತರಿಸಲು ಸರ್ಕಾರ ಗುರಿಹಾಕಿಕೊಂಡಿದೆ. ಜ.3ರಿಂದ 15-18 ವಯೋಮಾನದವರಿಗೆ ಲಸಿಕೆ ವಿತರಿಸಲು ವ್ಯವಸ್ಥಿತ ತಯಾರಿ ನಡೆದಿದ್ದು, ಮೊದಲ ದಿನ 4 ಸಾವಿರಕ್ಕಿಂತ ಹೆಚ್ಚು ಕೇಂದ್ರದಲ್ಲಿ 6 ಲಕ್ಷ ಮಕ್ಕಳಿಗೆ ಲಸಿಕೆ ವಿತರಿಸಲು ಉದ್ದೇಶಿಸಲಾಗಿದೆ. ಅಂದಹಾಗೆ ಸರ್ಕಾರದ ಬಳಿ 16 ಲಕ್ಷ ಕೋವ್ಯಾಕ್ಸಿನ್ ಲಸಿಕಾ ಡೋಸ್ ದಾಸ್ತಾನಿದ್ದು, 31.75 ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದಾರೆ. ಶಾಲಾ ಕಾಲೇಜುಗಳಲ್ಲೇ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದ್ದು, ಸಮೀಪದ ಆರೋಗ್ಯ ಕೇಂದ್ರಗಳಲ್ಲೂ ಸಹ ವಿತರಿಸಲಾಗುತ್ತದೆ. ಜಾಗೃತಿ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಮೂಡಲಪಾಳ್ಯದಲ್ಲಿರುವ ಕಾಲೇಜಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ, ತಾಲೂಕು ಮಟ್ಟದಲ್ಲಿ ವಿಧಾನಸಭಾ ಸದಸ್ಯರು ಚಾಲನೆ ನೀಡಲಿದ್ದಾರೆ. ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ ಮಕ್ಕಳಿಗೆ ಕಾರ್ವಿುಕ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಸಮೀಪದ ಲಸಿಕಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಲಸಿಕೆ ಕುರಿತು ಇರುವ ಗೊಂದಲ, ಹಿಂಜರಿಕೆ ನಿವಾರಣೆಗಾಗಿ ಕೇಂದ್ರದ ಬಳಿ ಜಾಗೃತಿ ಮೂಡಿಸಲೂ ಸಹ ವ್ಯವಸ್ಥೆ ಮಾಡಲಾಗುತ್ತಿದೆ.

10 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ

ರಾಜ್ಯದಲ್ಲಿ ಭಾನುವಾರ 1,187 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೋವಿಡ್ ಸೋಂಕು ಖಚಿತತೆ ಪ್ರಮಾಣ ಶೇ.1.08 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10 ಸಾವಿರ ಗಡಿ ದಾಟಿದೆ. 24 ಗಂಟೆಗಳಲ್ಲಿ ರಾಜ್ಯಾದ್ಯಂತ 1,08,911 ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಕಳೆದ ಮೂರು ತಿಂಗಳ ನಂತರ ಪಾಸಿಟಿವಿಟಿ ದರ ಶೇ.1ಕ್ಕಿಂತ ಅಧಿಕವಾಗಿದೆ. ಈ ಮೂಲಕ ಸಕ್ರಿಯ ಪ್ರಕರಣ 10,292ಕ್ಕೆ ಏರಿಕೆ ಆಗಿದೆ. ಒಟ್ಟು ಸೋಂಕಿತರ ಸಂಖ್ಯೆ 30.09 ಲಕ್ಷಕ್ಕೆ ತಲುಪಿದೆ. ಸೋಂಕಿಗೆ 6 ಮಂದಿ ಬಲಿಯಾಗಿದ್ದು, ಮೃತರ ಪ್ರಮಾಣ 38,346ಕ್ಕೆ ಏರಿಕೆ ಆಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 275 ಮಂದಿ ಬಿಡುಗಡೆ ಆಗಿದ್ದು, ಒಟ್ಟು ಗುಣಮುಖರ ಸಂಖ್ಯೆ 29.60 ಲಕ್ಷ ಮೀರಿದೆ. ಬೆಂಗಳೂರು ನಗರದಲ್ಲಿ 923 ಪ್ರಕರಣ ವರದಿಯಾಗಿವೆ. 12 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಒಂದಂಕಿಯಲ್ಲಿದ್ದು, 8 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ವರದಿಯಾಗಿಲ್ಲ.