ನವದೆಹಲಿ : ಸ್ವಿಟ್ಜರ್ಲ್ಯಾಂಡ್ನಿಂದ ಬಂದ ಆಕ್ಸಿಜನ್ ಕಾನ್ಸಂಟ್ರೇಟರ್ಅನ್ನು ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜಿ.ಬಿ.ಪಂತ್ ಆಸ್ಪತ್ರೆಯಲ್ಲಿ ರೋಗಿಯ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಂ ಬಾಗ್ಚಿ ಅವರು ಇಂದು ವಿಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ.
ಇದು ಸ್ವಿಟ್ಜರ್ಲ್ಯಾಂಡ್ ಕಳೆದ ವಾರ ಕಳುಹಿಸಿಕೊಟ್ಟ 600 ಕಾನ್ಸಂಟ್ರೇಟರ್ ಉಪಕರಣಗಳಲ್ಲಿ ಒಂದು. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದ್ದು, ದೇಶದ ದೂರದ ಮೂಲೆಗಳನ್ನೂ ತಲುಪಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮೇ 7 ರ ಬೆಳಗ್ಗೆ ಸ್ವಿಟ್ಜರ್ಲ್ಯಾಂಡ್ ವಿಮಾನ ಭಾರತಕ್ಕೆ 600 ಆಕ್ಸಿಜನ್ ಕಾನ್ಸಂಟ್ರೇಟರ್ಗಳು, 50 ವೆಂಟಿಲೇಟರ್ಗಳು ಮತ್ತು ಇತರ ವೈದ್ಯಕೀಯ ಅಗತ್ಯಗಳನ್ನು ಕಳುಹಿಸಿಕೊಟ್ಟಿದೆ. ಈ ಸ್ನೇಹಮಯ ಕಾರ್ಯಕ್ಕೆ ಧನ್ಯವಾದಗಳು ಎಂದು ಬಾಗ್ಚಿ ಅವರು ಕಳೆದ ವಾರ ತಿಳಿಸಿದ್ದರು.
ವಾತಾವರಣದಲ್ಲಿ ಶೇ. 21 ರಷ್ಟಿರುವ ಆಕ್ಸಿಜನ್ ಪ್ರಮಾಣವನ್ನು ಎಳೆದು ಕಾನ್ಸಂಟ್ರೇಟ್ ಮಾಡಿ ಪೈಪ್ ಮೂಲಕ ರೋಗಿಗೆ ಶುದ್ಧ ಆಕ್ಸಿಜನ್ ಒದಗಿಸುವ 'ಆಮ್ಲಜನಕ ಸಾಂದ್ರಕ' ಅಥವಾ 'ಆಕ್ಸಿಜನ್ ಕಾನ್ಸಂಟ್ರೇಟರ್'ಗಳನ್ನು ಶೇ. 85 ಕ್ಕಿಂತ ಹೆಚ್ಚು ಎಸ್ಪಿಒ2 ಇರುವ ಕರೊನಾ ರೋಗಿಗಳ ಚಿಕಿತ್ಸೆಗೆ ಮನೆಯಲ್ಲೇ ಬಳಸಬಹುದು ಎನ್ನಲಾಗಿದೆ.