ನವದೆಹಲಿ: ಕರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಈಗಾಗಲೇ 30 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 400ರ ಗಡಿ ದಾಟಿ 427ಕ್ಕೆ ತಲುಪಿದೆ.
ಇಂದು ಮಹಾರಾಷ್ಟ್ರದಲ್ಲಿ 15 ಜನರಲ್ಲಿ ಸೋಂಕಿರುವುದು ದೃಢವಾಗಿದ್ದು ರಾಜ್ಯದ ಸೋಂಕಿತರ ಸಂಖ್ಯೆ 89ಕ್ಕೆ ತಲುಪಿದೆ. ಗುಜರಾತ್ನಲ್ಲಿ 11 ಪ್ರಕರಣಗಳು ಪತ್ತೆಯಾಗಿದ್ದು ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 29 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ತಮಿಳುನಾಡಿನಲ್ಲಿ ಎರಡು ನೂತನ ಪ್ರಕರಣಗಳು, ಬಿಹಾರ್ನಲ್ಲಿ ಒಂದು ಮತ್ತು ಉತ್ತರ ಪ್ರದೇಶದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.
ಕರೊನಾ ವೈರಸ್ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಗುಣಮುಖನಾಗಿದ್ದು, ಆಸ್ಪತ್ರೆಯಲ್ಲಿ ಮರಣ ಹೊಂದಿರುವ ಘಟನೆ ಮುಂಬೈನಲ್ಲಿ ಇಂದು ವರದಿಯಾಗಿದೆ.
ಭಾನುವಾರದ ವರದಿಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಕರೊನಾ ದಾಳಿಗೆ ಒಳಗಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, 67 ಪ್ರಕರಣಗಳೊಂದಿಗೆ ಕೇರಳ ಎರಡನೇ ಸ್ಥಾನ, 29 ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಮೂರನೇ ಸ್ಥಾನ, 27 ಪ್ರಕರಣಗಳೊಂದಿಗೆ ರಾಜಸ್ಥಾನ ಮತ್ತು ತೆಲಂಗಾಣ ನಾಲ್ಕನೇ ಸ್ಥಾನ, 26 ಪ್ರಕರಣದೊಂದಿಗೆ ಕರ್ನಾಟಕ ಐದನೇ ಸ್ಥಾನದಲ್ಲಿದೆ. (ಏಜನ್ಸೀಸ್)