ನವದೆಹಲಿ: ಕಳೆದ ಮಾರ್ಚ್ನಲ್ಲಿ ದಕ್ಷಿಣ ದೆಹಲಿಯ ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದಿದ್ದ ತಬ್ಲೀಘ್ ಜಮಾತ್ನಲ್ಲಿ ಪಾಲ್ಗೊಂಡಿದ್ದ 2,000 ಕ್ಕೂ ಅಧಿಕ ವಿದೇಶಿಗರು ಇನ್ನು 10 ವರ್ಷಗಳ ಕಾಲ ಭಾರತ ಪ್ರವೇಶಿಸುವಂತಿಲ್ಲ...!
ತಬ್ಲಿಘ್ ಜಮಾತ್ಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿಯ ಕ್ರೈಂ ಬ್ರ್ಯಾಂಚ್ ಪೊಲೀಸರು ಮತ್ತೆ 12 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದ್ದು, 541 ವಿದೇಶಿಗರನ್ನು ಹೆಸರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಿಗರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಈ ಹಿಂದೆಯೂ ತಬ್ಲೀಘ್ ಜಮಾತ್ನಲ್ಲಿ ಪಾಲ್ಗೊಂಡಿದ್ದ ವಿದೇಶಿಗರು ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದ ಪರಿಣಾಮ 1,750 ಜನರ ವೀಸಾಗಳನ್ನು ಕೇಂದ್ರ ಗೃಹ ಸಚಿವಾಲಯ ಕಪ್ಪುಪಟ್ಟಿಗೆ ಸೇರಿಸಿತ್ತು. ಹೊಸ ಚಾರ್ಜ್ಶೀಟ್ ಬಳಿಕ ಕ್ರಮಕ್ಕೆ ಗುರಿಯಾದ ವಿದೇಶಿಗರ ಸಂಖ್ಯೆ 2,083ಕ್ಕೆ ಏರಿದಂತಾಗಿದೆ.
ತಬ್ಲೀಘ್ ಜಮಾತ್ನಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ವಿದೇಶಿಗರು ಆಗಮಿಸಿದ್ದರು. ವೀಸಾ ನಿಯಮಗಳನ್ನು ಉಲ್ಲಂಘಿಸಿ ಭಾರತದ ವಿವಿಧೆಡೆ ತೆರಳಿ ಧರ್ಮ ಪ್ರಚಾರದಲ್ಲಿ ತೊಡಗಿದ್ದ ಆರೋಪಕ್ಕೆ ಗುರಿಯಾಗಿದ್ದರು. ಅಲ್ಲದೇ. ಕರೊನಾ ವ್ಯಾಪಿಸಲು ಕಾರಣರಾಗಿದ್ದಾರೆ ಎಂದು ವಿವಿಧ ರಾಜ್ಯಗಳಲ್ಲಿ ಇವರ ವಿರುದ್ಧ ಪ್ರಕರಣವೂ ದಾಖಲಾಗಿದೆ.
ಟೂರಿಸ್ಟ್ ವೀಸಾ ಪಡೆದು ಆಗಮಿಸುವ ವಿದೇಶಿಗರು ವೀಸಾ ನಿಯಮ ಉಲ್ಲಂಘಿಸಿದ್ದಲ್ಲದೇ, ಕರೊನಾ ಹಬ್ಬಲು ತಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ಬೇಕೆಂದೇ ಪಾಲಿಸದೇ, ರೋಗ ಹರಡಲು ಕಾರಣರಾಗಿದ್ದಾರೆ ಎಂದು ಪೊಲೀಸರು ದಾಖಲಿಸಿದ್ದ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಇದಲ್ಲದೇ. ಕ್ವಾರಂಟೈನ್ನಲ್ಲಿದ್ದಾಗಲೂ ವಿಕೃತಿ ಮೆರೆದು, ವೈದ್ಯರಿಗೆ ಹಾಗೂ ಅಧಿಕಾರಿಗಳಿಗೆ ಸಂಕಷ್ಟ ತಂದಿಟ್ಟಿದ್ದರು. ಈ ಬಗ್ಗೆಯೂ ದೆಹಲಿಯ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.