Heavy Rain : ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಭಾನುವಾರ (ಮೇ 25) ಮುಂಜಾನೆ ಸುರಿದ ಬಿರುಗಾಳಿ ಮತ್ತು ಗುಡುಗು ಸಹಿತ ಭಾರೀ ಮಳೆಗೆ ನಗರದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಬೇಸಿಗೆಯ ಬಿಸಿಲಿಗೆ ಮಳೆರಾಯ ತಂಪೆರೆದರು ಕೂಡ ಪ್ರವಾಹ ಪರಿಸ್ಥಿತಿ ಮತ್ತು ವಿಮಾನ ವಿಳಂಬದಿಂದಾಗಿ ಸಾಕಷ್ಟು ಅಡಚಣೆಗಳು ಉಂಟಾದವು. ಹಲವಾರು ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ನೀರಿನಿಂದ ತುಂಬಿ ಸಂಚಾರಕ್ಕೆ ಅಡ್ಡಿಯಾದವು.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಬಿರುಗಾಳಿ ಮತ್ತು ಮಳೆಯಿಂದಾಗಿ 100ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಚಂಡಮಾರುತದ ಸಮಯದಲ್ಲಿ 25ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ.
ದೆಹಲಿ ವಿಮಾನ ನಿಲ್ದಾಣದ ಇತ್ತೀಚಿನ ಮಾಹಿತಿ ಪ್ರಕಾರ, ನಿನ್ನೆ ರಾತ್ರಿಯ ವಿಮಾನಗಳ ಹಾರಾಟದಲ್ಲಿ ಉಂಟಾದ ಅಡಚಣೆಗಳು ಇನ್ನೂ ಪರಿಣಾಮ ಬೀರಿವೆ. ಇತ್ತೀಚಿನ ಅಪ್ಡೇಟ್ಗಳಿಗಾಗಿ ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸುತ್ತಿರಬೇಕೆಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ದೆಹಲಿಯ ಸಫ್ದರ್ಜಂಗ್ನಲ್ಲಿ 81 ಮಿಮೀ, ಪಾಲಂನಲ್ಲಿ 68 ಮಿಮೀ, ಪುಸಾದಲ್ಲಿ 71 ಮಿಮೀ ಹಾಗೂ ಮಯೂರ್ ವಿಹಾರ್ನಲ್ಲಿ 48 ಮಿಮೀ ಮಳೆಯಾಗಿದೆ. ನಗರದ ಇತರ ಹಲವು ಭಾಗಗಳಲ್ಲಿ 5 ರಿಂದ 8 ಸೆಂ.ಮೀ. ಮಳೆಯಾಗಿದೆ. ವಿಮಾನ ನಿಲ್ದಾಣದ ಕಡೆಗೆ ಹೋಗುವ ಅಂಡರ್‌ಪಾಸ್‌ನಲ್ಲಿ ನೀರು ನಿಂತ ಕಾರಣ ಹಲವಾರು ವಾಹನಗಳು ಸ್ಥಗಿತಗೊಂಡಿರುವುದು ಕಂಡುಬಂದಿದೆ. ಭಾರೀ ಮಳೆಯ ಸಮಯದಲ್ಲಿ ಮಿಂಟೋ ರಸ್ತೆಯಲ್ಲಿ ನೀರು ತುಂಬಿದ ನಂತರ ಕಾರೊಂದು ಮುಳುಗಿ ಹೋಗಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸುದ್ದಿ ಸಂಸ್ಥೆ ANI ಹಂಚಿಕೊಂಡಿದೆ.
ದೆಹಲಿ ಮತ್ತು ಪಕ್ಕದ ರಾಜ್ಯಗಳಲ್ಲಿ ಧೂಳುಯುಕ್ತ ಬಿರುಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಗಂಟೆಗೆ 60 ರಿಂದ 100 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಐಎಂಡಿ ಶನಿವಾರ ಮುನ್ಸೂಚನೆ ನೀಡಿತ್ತು. ಮುನ್ಸೂಚನೆಯಂತೆ ಭಾನುವಾರ ವರುಣ ಅಬ್ಬರಿಸಿದ್ದಾನೆ. (ಏಜೆನ್ಸೀಸ್)