ನ್ಯೂಸ್

ಎಚ್ಚರಿಕೆ! ಲಕ್ಷಕ್ಕೂ ಅಧಿಕ ಗುರುತಿನ ಚೀಟಿಗಳು ಡಾರ್ಕ್​ನೆಟ್​ನಲ್ಲಿ ಮಾರಾಟಕ್ಕಿದೆ ಎಂದು ಎಚ್ಚರಿಸಿದ ಸೈಬರ್​ ಸಂಸ್ಥೆ

ನವದೆಹಲಿ: ಭಾರತೀಯರಿಗೆ ಸಂಬಂಧಿಸಿದ ಆಧಾರ್ ಕಾರ್ಡ್​, ಪ್ಯಾನ್ ಕಾರ್ಡ್​, ಪಾಸ್​ಪೋರ್ಟ್​ ಸೇರಿ ವಿವಿಧ ರಾಷ್ಟ್ರೀಯ ಗುರುತಿನ ಚೀಟಿಗಳ ಸ್ಕ್ಯಾನ್​ ಮಾಡಿದ ಒಂದು ಲಕ್ಷಕ್ಕೂ ಹೆಚ್ಚು ಕಾಪಿಗಳು ಡಾರ್ಕ್​ನೆಟ್​ನಲ್ಲಿ ಮಾರಾಟಕ್ಕೆ ಇಟ್ಟಿರುವುದು ಪತ್ತೆಯಾಗಿದೆ. ಇದನ್ನು ಥರ್ಡ್​ ಪಾರ್ಟಿ ಮಾಡಿದ್ದು, ಸರ್ಕಾರದ ವೆಬ್​ನಿಂದ ಸೋರಿಕೆಯಾದುದಲ್ಲ. ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಿರುವ ಈ ಚೀಟಿಗಳನ್ನು ಈ ರೀತಿ ಕೇವಲವಾಗಿ ಬಿಕರಿಗಿಟ್ಟಿರುವುದು ಕಳವಳಕಾರಿ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಬಲ್​ ಬುಧವಾರ ಎಚ್ಚರಿಸಿದೆ.

ಡಾರ್ಕ್​​ನೆಟ್​ನಲ್ಲಿ ಈ ಗುರುತಿನ ಚೀಟಿ ಮಾರಾಟಗಾರನಿಂದ ಸೈಬಲ್​ನ ಪರಿಣತರು 1,000 ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದು ಅವುಗಳನ್ನು ಎಲ್ಲವೂ ಭಾರತೀಯರಿಗೆ ಸೇರಿದ ಸ್ಕ್ಯಾನ್ಡ್ ಕಾಪಿಗಳೆಂಬುದನ್ನು ಖಾತರಿ ಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಒಂದು ಕಂಪನಿಗೆ ಕೆವೈಸಿ (Know Your Customer) ನಿಯಮಗಳನ್ನು ಪೂರೈಸಲು ನೀಡಿದ್ದಾಗಿದ್ದು, ಅಲ್ಲಿಂದ ಸೋರಿಕೆಯಾಗಿದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆದಿದ್ದು, ಹೆಚ್ಚಿನ ವಿವರಗಳನ್ನು ಮುಂದಿನ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಸೈಬಲ್ ಹೇಳಿಕೊಂಡಿದೆ.

ಸೈಬರ್​ ಕ್ರಿಮಿನಲ್​ಗಳಿಂದ ಈ ರೀತಿ ಸೋರಿಕೆಯಾಗಿರುವ ವೈಯಕ್ತಿಕ ಡೇಟಾವನ್ನು ಐಡೆಂಟಿಟಿ ಥೆಫ್ಟ್​, ಹಗರಣಗಳು, ಕಾರ್ಪೊರೇಟ್​ ಬೇಹುಗಾರಿಕೆ ಸೇರಿದಂತೆ ಹಲವು ರೀತಿಯ ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಬಹುತೇಕ ವಂಚಕರು ಈ ಗುರುತಿನ ಚೀಟಿಯ ವಿವರಗಳನ್ನು ಇಟ್ಟುಕೊಂಡು ಜನರ ವಿಶ್ವಾಸ ಗಳಿಸಿ ವಂಚನೆ ಮಾಡುವ ಉದ್ದೇಶಕ್ಕಾಗಿಯೇ ಬಳಸುತ್ತಾರೆ. ಬಹುತೇಕ ಹಿರಿಯರನ್ನು ವಂಚಕರು ಟಾರ್ಗೆಟ್ ಮಾಡುತ್ತಾರೆ.

ಪ್ರತಿಯೊಬ್ಬರೂ ಒಂದಿಲ್ಲೊಂದು ಕಾರಣಕ್ಕೆ ಗುರುತಿನ ಚೀಟಿಗಳನ್ನು ಕೆವೈಸಿಗಾಗಿ ನೀಡಿಯೇ ನೀಡಿರುತ್ತೇವೆ. ಹೀಗಾಗಿ ನಿಯತವಾಗಿ ಹಣಕಾಸಿನ ವಹಿವಾಟಿನ ಮೇಲೆ ನಿಗಾ ಇರಿಸುವುದು ಅವಶ್ಯ. ಅಪರಿಚಿತರ ಕರೆ, ಎಸ್​ಎಂಎಸ್​, ಇಮೇಲ್​ಗಳಿಗೆ ಸ್ಪಂದಿಸಿ ಅವರು ಕೇಳಿದ ವಿವರ ನೀಡಿದರೆ ಈ ರೀತಿಯ ವಂಚನೆಗೆ ಒಳಗಾಗಬೇಕಾಗುತ್ತದೆ ಎಂದು ಸೈಬಲ್ ಎಚ್ಚರಿಸಿದೆ.

ಕಳೆದ ತಿಂಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 7.65 ಕೋಟಿ ಭಾರತೀಯರ ವೈಯಕ್ತಿಕ ಡೇಟಾವನ್ನು ಡಾರ್ಕ್​ನೆಟ್​ನಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ಸೈಬಲ್ ಗಮನಸೆಳೆದಿತ್ತು. ಒಂದು ಪ್ರಕರಣದಲ್ಲಿ ಒಬ್ಬ ಮಾರಾಟಗಾರ 4.75 ಕೋಟಿ ಭಾರತೀಯರ ಡೇಟಾವನ್ನು ಆನ್​ಲೈನ್​ ಡೈರೆಕ್ಟರಿ ಟ್ರೂಕಾಲರ್​ನಿಂದ ಸೋರಿಕೆ ಮಾಡಿ ಇಟ್ಟಿರುವುದಾಗಿ ಹೇಳಿಕೊಂಡಿದ್ದ. ಟ್ರೂ ಕಾಲರ್ ಇದನ್ನು ನಿರಾಕರಿಸಿದೆ. ಇನ್ನೊಂದರಲ್ಲಿ ಜಾಬ್​ವೆಬ್​ಸೈಟ್​ನಿಂದ ಸೋರಿಕೆ ಮಾಡಿ ಮಾರುತ್ತಿರುವುದಾಗಿ ಹೇಳಿಕೊಂಡಿದ್ದ. (ಏಜೆನ್ಸೀಸ್)