Domestic Worker Viral Video: ಮನೆಕೆಲಸದಾಕೆ ಕಳ್ಳತನ ಮಾಡಿದ್ದಾಳೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೃಶ್ಯದಲ್ಲಿ ಮಹಿಳೆ ಮಾಲೀಕರ ಮುಂದೆ ಕೈಮುಗಿದು ಕ್ಷಮೆ ಕೇಳುತ್ತಿರುವಂತೆ ಕಾಣುತ್ತದೆ. ಈ ವೇಳೆ ಮಾಲೀಕ, ‘ಡ್ರಾಮಾ ಮಾಡಬೇಡ’ ಎಂದು ಹೇಳಿ, ಆಕೆಗೆ ಬಾಕಿ ಸಂಬಳ ಪಡೆದು ಹೋಗುವಂತೆ ಹೇಳಿದ್ದಾರೆ.
ವೈರಲ್ ವಿಡಿಯೊದ ಜೊತೆ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಮಹಿಳೆ ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ಬದಲು, ಆಕೆ ಕೆಲಸ ಮಾಡಿದ ದಿನಗಳ ಬಾಕಿ ಸಂಬಳ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಆರೋಪಗಳಿಗೆ ಇನ್ನೂ ದೃಢೀಕರಣ ಸಿಕ್ಕಿಲ್ಲ.
ಮಾಲೀಕ ಮಹಿಳೆಯ ಮೇಲೆ ಹಲ್ಲೆ ಮಾಡದೆ, ಬಾಕಿ ಸಂಬಳ ಕೊಟ್ಟು ಕಳುಹಿಸಿರುವುದನ್ನು ಕೆಲವರು ಮೆಚ್ಚಿದ್ದಾರೆ. ಆದ್ರೆ, ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನ ಮಾಡಿಲ್ಲ ಅಂತ ಹೇಳುತ್ತಲೇ, ಆಕೆಯ ಮುಖ ಕಾಣುವಂತೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದೇಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಕಳ್ಳತನ ನಡೆದಿದ್ರೆ ಪೊಲೀಸರಿಗೆ ದೂರು ನೀಡಬೇಕಿತ್ತು ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು, ಯಾವುದೇ ಹಿಂಸಾಚಾರಕ್ಕೆ ಇಳಿಯದೆ ವಿಷಯವನ್ನು ಬಗೆಹರಿಸಿ, ಬಾಕಿ ಸಂಬಳ ಕೊಟ್ಟು ಕಳುಹಿಸಿರುವುದು ಸರಿಯಾಗಿದೆ ಎಂದಿದ್ದಾರೆ.
ಈ ಘಟನೆ ಮನೆಕೆಲಸದವರು ಹಾಗೂ ಮಾಲೀಕರ ನಡುವಿನ ನಂಬಿಕೆ, ಕೆಲಸದ ವಿಚಾರದ ಗಲಾಟೆ ಮತ್ತು ಇಂತಹ ಘಟನೆಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಬಗ್ಗೆ ಚರ್ಚೆ ಹುಟ್ಟುಹಾಕಿದೆ.(ಏಜೆನ್ಸೀಸ್)