ನ್ಯೂಸ್

ED ವಿಚಾರಣೆ ಎದುರಿಸೋಕೆ ನಮ್ಮ ಕುಟುಂಬ ಸದಾ ಸಿದ್ಧ: DK ಶಿವಕುಮಾರ್

ಬೆಂಗಳೂರು: ಇಡಿ ವಿಚಾರಣೆ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧ. ಯಾರದ್ದೋ ಹೇಳಿಕೆ ಮೇಲೆ ಡಿ.ಕೆ. ಸುರೇಶ್ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಇದನ್ನು ಮಾಧ್ಯಮಗಳು ವೈಭವೀಕರಿಸುವ ಅಗತ್ಯವಿಲ್ಲ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು. “ಈ ಹಿಂದೆ ನನ್ನ ಮೇಲೂ ಇಡಿ ಪ್ರಕರಣ ದಾಖಲಿಸಿತ್ತು. ಅದು ಏನಾಯ್ತು? ನಮ್ಮ ರಕ್ಷಣೆಗೆ ಯಾರೂ ಬರಲಿಲ್ಲ. ಕೊನೆಗೆ ನಮಗೆ ರಕ್ಷಣೆ ನೀಡಿದ್ದು ನ್ಯಾಯಾಂಗ ವ್ಯವಸ್ಥೆ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನ ಬಂದಾಗ ಅವರನ್ನು ಭೇಟಿ ಮಾಡುವು ಸಹಜ. ಇಡಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸುರೇಶ್ ತಯಾರಿದ್ದಾರೆ. ಮಾಧ್ಯಮಗಳು ಹೆಚ್ಚು ಆದ್ಯತೆ ನೀಡಬೇಕಾದ ಪ್ರಕರಣಗಳನ್ನು ಬಿಟ್ಟು, ಇದನ್ನು ಹೆಚ್ಚು ಬಿಂಬಿಸಲು ಮುಂದಾಗಿದ್ದೀರಿ. ಇದರ ಅಗತ್ಯವಿಲ್ಲ” ಎಂದು ತಿಳಿಸಿದರು.

ಶಾಸಕ ಬಿ.ಆರ್ ಪಾಟೀಲ್ ಅವರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಕೂಡ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಈ ವಿಚಾರವಾಗಿ ಏನು ಹೇಳಬೇಕೋ ಹೇಳಿದ್ದೇನೆ. ಉಳಿದಂತೆ ಈ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ವಸತಿ ಸಚಿವರು ಸ್ಪಷ್ಟನೆ ನೀಡುತ್ತಾರೆ” ಎಂದು ಹೇಳಿದರು.